ಮುಂದಿನ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜನರ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ: ದಿನೇಶ್ ಅಮೀನ್ ಮಟ್ಟು
ಬೆಂಗಳೂರು, ಅ.24: ಭಾರತಕ್ಕೆ ಸ್ವಾತಂತ್ರವೂ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೂ ಜಾರಿಯಾಗಿದೆ. ಆದರೆ, ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ ಇಂದಿಗೂ ಮರೀಚಿಕೆಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ವಿಷಾದಿಸಿದ್ದಾರೆ.
ಮಂಗಳವಾರ ಮಾನವ ಬಂಧುತ್ವ ವೇದಿಕೆ ಹಾಗೂ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ನಗರದ ಜ್ಞಾನ ಭಾರತಿ ಆವರಣದಲ್ಲಿ ಆಯೋಜಿಸಿದ್ದ ‘ಅಭಿವ್ಯಕ್ತಿ ಸ್ವಾತಂತ್ರ ಮತ್ತು ಸಮಕಾಲೀನ ಭಾರತ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಹರಣ ಜಾತಿ, ಧರ್ಮ ಮೀರಿ ಬೆಳೆಯುತ್ತಿದೆ. ದೇಶದಲ್ಲಿ ಕೋಮುವಾದಿಗಳು ನಡೆಸುತ್ತಿರುವ ದುಷ್ಕೃತ್ಯಗಳನ್ನು ವಿರೋಧಿಸುವವರನ್ನು ಭಯ ಪಡಿಸುವುದು, ಹಿಂಸಿಸುವುದು ಹಾಗೂ ಕೊಲೆ ಮಾಡುವ ಹಂತಕ್ಕೆ ಮುಟ್ಟಿದೆ. ದೇಶವ್ಯಾಪಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದರು.
ಈಗಾಗಲೇ ಕೋಮುವಾದಿಗಳಿಂದ ಪ್ರಗತಿಪರ ನಾಯಕ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ, ದಾಭೋಲ್ಕರ್, ಪನ್ಸಾರೆ, ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತರಾಗಿದ್ದಾರೆ. ಹಾಗೂ ಹಲವು ಪ್ರಗತಿಪರ ನಾಯಕರಿಗೆ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಉಳಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಲಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಬಹುತೇಕ ಮಾಧ್ಯಮಗಳು ಬಂಡವಾಳಶಾಹಿಗಳಾದ ಅದಾನಿ, ಅಂಬಾನಿಗಳ ವಶದಲ್ಲಿವೆ. ಹೀಗಾಗಿ ಬಂಡವಾಳಶಾಹಿಗಳಿಗೆ ಬೇಕಾದ ವಿಷಯಗಳು ಮಾತ್ರ ಸುದ್ದಿಗಳಾಗುತ್ತವೆ ವಿನಃ ಬಡವರ ಕುರಿತು, ನಾಡಿನ ಸಂಸ್ಕೃತಿ ಹಾಗೂ ಸಾಮಾಜಿಕ, ಆರ್ಥಿಕ ಅಸಮಾನತೆಯ ಕುರಿತು ಸುದ್ದಿಯೇ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ದೇಶದಲ್ಲಾಗುತ್ತಿರುವ ನೈಜ ಘಟನೆಗಳು ಅರಿವಿಗೆ ಬರುವುದಿಲ್ಲ ಎಂದು ಅವರು ವಿಷಾದಿಸಿದರು.
ಕೋಮುವಾದಿ ಹಾಗೂ ಬಂಡವಾಳಶಾಹಿಗಳು ಮಾಧ್ಯಮವನ್ನು ಬಳಸಿಕೊಂಡು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ದಿನ ಕಳೆದಂತೆ ಜನಸಾಮಾನ್ಯರ ಬದುಕು ದುಸ್ಥರವಾಗುತ್ತಿದೆ. ಮುಂದಿನ ಭಾರೀ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದರೆ ಜನರ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ದೇಶದಲ್ಲಿ ಸರ್ವಾಧಿಕಾರಿ ಆಡಳಿತಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಯುತ್ತಿದೆ. ಇದಕ್ಕಾಗಿ ಸಂಘಪರಿವಾರ ಏಕ ದೇಶ, ಏಕ ಸಂಸ್ಕೃತಿ, ಏಕ ಭಾಷೆಗೆ ಅನುಗುಣವಾಗುವಂತಹ ರೀತಿಯಲ್ಲಿ ಪಠ್ಯಕ್ರಮ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಬಿತ್ತಲಾರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಬಹುತ್ವ ನೆಲೆಗಳನ್ನು ಗಟ್ಟಿಗೊಳಿಸಲು ಜನ ಸಮುದಾಯ ಪಣ ತೊಡಬೇಕಾಗಿದೆ ಎಂದು ತಿಳಿಸಿದರು.
ಈ ವೇಳೆ ಮಾನವ ಬಂಧುತ್ವ ವೇದಿಕೆಯ ಅನಂತ್ ನಾಯಕ್, ಹಿರಿಯ ಬರಹಗಾರ್ತಿ ಕೆ.ನೀಲಾ ಸೇರಿದಂತೆ ಹಲವು ಅತಿಥಿಗಳು ಭಾಗವಹಿಸಿದ್ದರು.