'ನಮ್ಮ ದೇಶ ಎಲ್ಲಾ ಧರ್ಮಗಳಿಗೂ ಮುಕ್ತವಾಗಿದೆ' ಎಂದ ಸೌದಿ ರಾಜಕುಮಾರನ ಹೇಳಿಕೆಗೆ ಭಾರೀ ಪ್ರಶಂಸೆ

Update: 2017-10-26 04:42 GMT

ರಿಯಾದ್, ಅ 25 : ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರು ಜಗತ್ತಿನ ಉದ್ಯಮ ರಂಗದ ಗಣ್ಯಾತಿಗಣ್ಯರು ಭಾಗವಹಿಸಿದ್ದ ಸಮಾರಂಭವೊಂದರಲ್ಲಿ ಮಂಗಳವಾರ ನೀಡಿದ ಹೇಳಿಕೆಯೊಂದು ಅಲ್ಲಿ ನೆರೆದಿದ್ದವರೆಲ್ಲರಿಗೂ ಅತ್ಯಾಶ್ಚರ್ಯ ಹುಟ್ಟಿಸಿದೆ.

ಉದ್ಯಮ ರಂಗದಲ್ಲಿ ಸೌದಿ ದೇಶವು ಬೀರುತ್ತಿರುವ ಪ್ರಭಾವವನ್ನು ವಿಶ್ವಕ್ಕೆ ತೋರಿಸಲು ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಮಾತನಾಡಿದ ಸೌದಿ ರಾಜಕುಮಾರ, "ನಮ್ಮ ದೇಶವು ಉಗ್ರವಾದದ ಮೂಲೋಚ್ಛಾಟನೆ ಮಾಡಲು ಕಂಕಣ ಬದ್ಧವಾಗಿದೆ, ನಮ್ಮ ದೇಶವು ವಿಶ್ವಕ್ಕೆ ಹಾಗೂ ಎಲ್ಲಾ ಧರ್ಮಗಳಿಗೂ ಮುಕ್ತವಾಗಿ'' ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳುತ್ತಲೇ ನೆರೆದಿದ್ದ  ಜನರೆಲ್ಲರೂ ಭಾರೀ ಕರತಾಡನದೊಂದಿಗೆ ತಮ್ಮ ಸಂತಸ ವ್ಯಕ್ತಪಡಿಸಿದರು.

ರಾಜಧಾನಿಯಲ್ಲಿ ನಡೆದ ಸಮ್ಮೇಳನವೊಂದನ್ನುದ್ದೇಶಿಸಿ ಮಾತನಾಡಿದ ಸೌದಿಯ ರಾಜಕುಮಾರ ``ಭಯೋತ್ಪಾದಕರ ಧೋರಣೆಗಳನ್ನು ಹೇಗೆ ನಿಭಾಯಿಸುವುದು ಎಂದು ಯೋಚಿಸುತ್ತಾ ನಮ್ಮ  ಜೀವನದ 30 ವರ್ಷಗಳನ್ನು ನಾವು ವ್ಯರ್ಥಗೊಳಿಸುವುದಿಲ್ಲ. ಬದಲಾಗಿ ನಾವು ಉಗ್ರವಾದವನ್ನೇ  ದೂರ ಮಾಡುತ್ತೇವೆ,'' ಎಂದು ತಿಳಿಸಿದರು.

ಇಂದಿನ ಸೌದಿ ಅರೇಬಿಯಾದಲ್ಲಿ ಈಗ ಲಭ್ಯವಿಲ್ಲದ ಜೀವನ ಶೈಲಿಯನ್ನೊದಗಿಸವ  ಹೊಸ ನಗರವನ್ನು ರೆಡ್ ಸೀ ತೀರದಲ್ಲಿ 500 ಬಿಲಿಯನ್ ಡಾಲರ್ ಗೂ ಅಧಿಕ ಮೊತ್ತದ ಹೂಡಿಕೆಯೊಂದಿಗೆ ನಿರ್ಮಿಸಲಾಗುವುದು ಹಾಗೂ ಸೌದಿ ಅರೇಬಿಯಾವನ್ನು ತೈಲೋತ್ತರ ಯುಗಕ್ಕಾಗಿ ಈ ಮೂಲಕ ಸಿದ್ಧಗೊಳಿಸಲು ಪ್ರಯತ್ನಗಳನ್ನು ಆರಂಭಿಸಲಾಗುವುದು. ಈ ಹೊಸ ನಗರಕ್ಕೆ ನಿಯೊಮ್ ಎಂಬ ಹೆಸರಿಡಲಾಗುವುದು, ಎಂದು ಹೇಳಿದರು.

2015ರಲ್ಲಿ ಅವರು ಅಧಿಕಾರಕ್ಕೆ ಬಂದಂದಿನಿಂದ ಹಲವಾರು ಸುಧಾರಣಾವಾದಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಸೌದಿ ರಾಜಕುಮಾರ ಇತ್ತೀಚೆಗಷ್ಟೇ ಸೌದಿ ಮಹಿಳೆಯರಿಗೆ  ವಾಹನ ಚಲಾವಣೆಗೆ ಹೇರಲಾಗಿದ್ದ ನಿಷೇಧನ್ನು ತೆರವುಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News