ಅಪರಾಧಿ ಮುರುಗೇಶನ್‌ಗೆ ಗಲ್ಲು ಶಿಕ್ಷೆ ಖಾಯಂ
ಬೆಂಗಳೂರು, ಅ.25: ಮಗು ಸೇರಿ ಐವರನ್ನು ಬರ್ಬರವಾಗಿ ಕೊಲೆಗೈದು ಚಿನ್ನಾಭರಣ, ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದ ತಮಿಳುನಾಡು ಮೂಲದ ಅಪರಾಧಿ ಮುರುಗೇಶನ್‌ಗೆ ಹೈಕೋರ್ಟ್ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿದೆ.
ಚಾಮರಾಜನಗರ ಪ್ರಧಾನ ಜಿಲ್ಲಾ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿರುವ ಅರ್ಜಿ ಹಾಗೂ ಗಲ್ಲು ಶಿಕ್ಷೆ ರದ್ದುಕೋರಿ ಮುರುಗೇಶನ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
2015ರ ಮೇ 11ರಂದು ತಮಿಳುನಾಡಿನಿಂದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮಕ್ಕೆ ಬಂದಿದ್ದ ಇವರೆಲ್ಲರೂ ಶೇಖರ್ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದರು. ಆದರೆ, ಅಪರಾಧಿ ಮುರುಗೇಶನ್ ಚಿನ್ನಾಭರಣ, ಹಣ, ಮೊಬೈಲ್ ಆಸೆಗೆ ಬಿದ್ದು ಇವನ ಜೊತೆಗಿದ್ದ ಐವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದನು.
ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸಿ ಮುರುಗೇಶನ್‌ನನ್ನು ಬಂಧಿಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ಪ್ರಧಾನ ಜಿಲ್ಲಾ ನ್ಯಾಯಾಲಯವು ಮುರುಗೇಶನ್‌ಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ರದ್ದುಕೋರಿ ಮುರುಗೇಶನ್ ಹೈಕೋರ್ಟ್ ಮೆಟ್ಟಿಲೇರಿದ್ದ. ನ್ಯಾಯಾಲಯವು ವಕೀಲರ ವಾದ ಪ್ರತಿವಾದವನ್ನು ಆಲಿಸಿ ಅಪರಾಧಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿ ಆದೇಶಿಸಿದೆ.