×
Ad

ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಮಂಗಳೂರು ಆಯುಕ್ತರಿಗೆ ಹೈಕೋರ್ಟ್ ಆದೇಶ

Update: 2017-10-25 22:15 IST

ಬೆಂಗಳೂರು, ಅ.25: ಮಂಗಳೂರಿನ ಬಿಲ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ನಿರ್ಮಾಣಕ್ಕೆ ನಿವಾಸಿ ಹೇಮಂತ್ ಎಂಬವರಿಗೆ ನಕ್ಷೆ ಮಂಜೂರಾತಿ ನೀಡಲು ಒಂದು ವರ್ಷದಿಂದ ಸತಾಯಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಎಲ್ಲ ದಾಖಲೆಗಳೊಂದಿಗೆ ನ.8ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ಮಂಗಳೂರು ಸಹಾಯಕ ಆಯುಕ್ತ, ತಹಶೀಲ್ದಾರ್ ಮತ್ತು ಬಿಲ್ಮ ಗ್ರಾಮ ಪಂಚಾಯತ್ ಪಿಡಿಒಗೆ ಹೈಕೋರ್ಟ್ ತಾಕೀತು ಮಾಡಿದೆ.

ವಸತಿ ಕಟ್ಟಡ ನಿರ್ಮಾಣಕ್ಕೆ ತಮಗೆ ನಕ್ಷೆ ಮಂಜೂರಾತಿ ನೀಡದಿರಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡ ಮತ್ತು ನಕ್ಷೆ ಮಂಜೂರಾತಿ ನೀಡದ ಕಾರ್ಯಕಾರಿ ಅಧಿಕಾರಿಯ ಕ್ರಮ ಪ್ರಶ್ನಿಸಿ ಹೇಮಂತ್ ಶೆಟ್ಟಿ ಎಂಬವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿತು.

ಅರ್ಜಿಯ ಕಳೆದ ವಿಚಾರಣೆ ವೇಳೆ ಪಂಚಾಯತ್ ಪಿಡಿಒ ಆಕ್ಷೇಪಣೆ ಸಲ್ಲಿಸಿ, ಹೇಮಂತ್ ಶೆಟ್ಟಿಯ ತಂದೆಗೆ ಬಿಲ್ಮ ಗ್ರಾಮ ಪಂಚಾಯಿತಿ ಸರ್ವೇ ನಂ 83ರಲ್ಲಿ ಮಂಜೂರಾಗಿದ್ದ ನಿವೇಶನವನ್ನು ಹಿಂದೆಯೇ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು. ಇದನ್ನು ಗುರುವಾರ ಆಕ್ಷೇಪಿಸಿದ ಹೇಮಂತ್ ಶೆಟ್ಟಿ ಪರ ವಕೀಲರು, ನಿವೇಶನ ಮಂಜೂರಾತಿ ರದ್ದಾಗಿರುವ ದಾಖಲೆಯು ಲಭ್ಯವಿಲ್ಲ ಎಂದು ಮಂಗಳೂರು ಜಿಲ್ಲಾ ಪಂಚಾಯತ್ ಸಿಇಒ ತಮಗೆ ಹಿಂಬರಹ ನೀಡಿದ್ದಾರೆ. ಆದರೆ, ಪಿಡಿಒ ನಿವೇಶನ ಮಂಜೂರಾತಿಯ ರದ್ದಾಗಿದೆ ಎಂದು ನಕಲಿ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದು, ಆ ಕುರಿತು ತನಿಖೆ ನಡೆಸಲು ಆದೇಶಿಸುವಂತೆ ಕೋರಿದರು.

ಇದರಿಂದ ಬೇಸರಗೊಂಡ ಹೈಕೋರ್ಟ್, ಪ್ರಕರಣ ಕುರಿತು ವಿವರಣೆ ನೀಡಲು ಎಲ್ಲ ದಾಖಲೆಗಳೊಂದಿಗೆ ನ.8ರಂದು ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಸಹಾಯಕ ಆಯುಕ್ತ, ತಹಶೀಲ್ದಾರ್ ಮತ್ತು ಬಿಲ್ಮ ಗ್ರಾಮ ಪಂಚಾಯತ್ ಪಿಡಿಒಗೆ ನಿರ್ದೇಶಿಸಿತು. ಈ ಪ್ರಕರಣದಲ್ಲಿ ಏನೋ ನಡೆಯುತ್ತಿದೆ ಎಂಬ ಅನುಮಾನ ಮೂಡುತ್ತಿದ್ದು, ವಕೀಲರ ಸಮೇತ ಸರಕಾರಿ ಅಧಿಕಾರಿಗಳನ್ನು ತನಿಖೆ ನಡೆಸಲು ಸಿಬಿಐಗೆ ಆದೇಶಿಸಲಾಗುವುದು ಎಂದು ಮೌಖಿಕ ಎಚ್ಚರಿಕೆ ನೀಡಿದ ಹೈಕೋರ್ಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News