ಉದ್ದೇಶಿತ ಸಭೆಗೆ ಅನುಮತಿ ನೀಡಲು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, ಅ.27: ಭಡ್ತಿ ಮೀಸಲಾತಿಯ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸಿ ಇದೇ ಅ.31ರಂದು ಅಹಿಂಸಾ ಒಕ್ಕೂಟದ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ಸಭೆಗೆ ಅನುಮತಿ ನೀಡಲು ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಅರಮನೆ ಮೈದಾನದಲ್ಲಿ ಉದ್ದೇಶಿತ ಸಭೆ ಆಯೋಜನೆಗೆ ಅನುಮತಿ ನೀಡಲು ನಿರಾಕರಿಸಿದ್ದ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿ ಕಾರ್ಪೊರೇಷನ್‌ಗಳಲ್ಲಿನ ನಿವೃತ್ತ, ಸೇವಾನಿರತ ನೌಕರರ ಹಿತರಕ್ಷಣಾ ಒಕ್ಕೂಟ (ಅಹಿಂಸಾ) ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಅಲ್ಲದೆ, ಪೊಲೀಸ್ ಇಲಾಖೆಯೂ ಸಭೆಗೆ ನೀಡಿ ದ್ದ ಅನುಮತಿಯನ್ನು ಹಿಂಪಡೆದಿದೆ.
ಈ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠ, ಅರ್ಜಿಯ ಸಂಬಂಧ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಅಧೀನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು. ಇದೇ ವೇಳೆ ಸಮಾರಂಭ ಆಯೋಜನೆಗೆ ಅನುಮತಿ ಕಲ್ಪಿಸುವಂತೆ ಅರ್ಜಿದಾರರ ಪರ ವಕೀಲರು ಮಾಡಿದ ಮಧ್ಯಂತರ ಮನವಿಯನ್ನು ಮಾನ್ಯ ಮಾಡಲು ನ್ಯಾಯಪೀಠ ನಿರಾಕರಿಸಿತು.
ಭಡ್ತಿ ಮೀಸಲಾತಿಯನ್ನು ರದ್ದುಪಡಿಸಿ ಸುಪ್ರೀಂಕೋರ್ಟ್ 2017ರ ಫೆ.9ರಂದು ತೀರ್ಪು ನೀಡಿದೆ. ಆದರೆ ತೀರ್ಪು ಅನುಷ್ಠಾನಗೊಳಿಸುವ ವಿಚಾರದಲ್ಲಿ ರಾಜ್ಯ ಸರಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಈ ಸಂಬಂಧ ರಾಜ್ಯ ಸರಕಾರವನ್ನು ಒತ್ತಾಯಿಸಿ ಅಹಿಂಸಾ ಒಕ್ಕೂಟದ ವತಿಯಿಂದ ಇದೇ ಅ.31ರಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಅ.3ರಂದು ಸರಕಾರದ ಅನುಮತಿ ಕೋರಲಾಗಿತ್ತು. ಆದರೆ ಅ.24ರಂದು ಸರಕಾರ ನಮ್ಮ ಮನವಿಯನ್ನು ತಿರಸ್ಕರಿಸಿ ಆದೇಶಿಸಿದ್ದು, ಈ ಆದೇಶವನ್ನು ರದ್ದುಪಡಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಜತೆಗೆ 31ರಂದು ನಡೆಯಲಿರುವ ಸಮಾವೇಶಕ್ಕೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ಮಧ್ಯಂತರ ಮನವಿ ಮಾಡಲಾಗಿದೆ.