×
Ad

ಉನ್ನತ ಶಿಕ್ಷಣ ಸಚಿವರ ವಿರುದ್ಧ ರಮೇಶ್‌ಬಾಬು ಆರೋಪ

Update: 2017-10-27 22:06 IST

ಬೆಂಗಳೂರು, ಅ.27: ರಾಜ್ಯ ಸರಕಾರವು ಡಾ.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ತೆರೆಯುವ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿದೆ. ಈ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಭಾಗಿಯಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ಆರೋಪಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಗರಣದಲ್ಲಿ ಹಣದ ದುರುಪಯೋಗ ತಡೆಯುವ ಪ್ರಯತ್ನ ಮಾಡಿದ ಅಧಿಕಾರಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಗರಣದ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದರೆ ರಾಜ್ಯ ಸರಕಾರದ ನೂರಾರು ಕೋಟಿ ರೂ.ಗಳನ್ನು ಲೂಟಿ ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ತೆರೆಯಲು ಸಚಿವ ಸಂಪುಟವು 90 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಈ ಕಾಲೇಜು ಡೀಮ್ಡ್ ವಿವಿಯಾಗಿ ಕಾರ್ಯ ನಿರ್ವಹಿಸುವ ಉದ್ದೇಶವನ್ನು ಸರಕಾರ ಹೊಂದಿದ್ದರೂ ಇದುವರೆಗೆ ಅದಕ್ಕೆ ಪೂರಕವಾದ ಯಾವುದೆ ಕಾಯ್ದೆಯಾಗಲಿ ಅಥವಾ ಸುಗ್ರೀವಾಜ್ಞೆ ಜಾರಿಯಾಗಿಲ್ಲ ಎಂದು ಹೇಳಿದರು.

ಈ ಕಾಲೇಜು ಬೆಂಗಳೂರು ವಿವಿಯ ತಾತ್ಕಾಲಿಕ ಅಂಗಸಂಸ್ಥೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಕಾಲೇಜಿನಲ್ಲಿ 50 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇವರು ಬೆಂಗಳೂರು ವಿವಿ ವ್ಯಾಪ್ತಿಯ ವಿದ್ಯಾರ್ಥಿಗಳಾಗಿರುತ್ತಾರೆ. ಕಾಲೇಜು ಆಡಳಿತಾತ್ಮಕವಾಗಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶನಾಲಯದ ವ್ಯಾಪ್ತಿಗೆ ಒಳಪಡುತ್ತದೆ ಎಂದು ತಿಳಿಸಿದರು.

ರಾಜ್ಯ ಸರಕಾರವು ಉನ್ನತ ಶಿಕ್ಷಣ ಸಚಿವರ ಒತ್ತಡಕ್ಕೆ ಮಣಿದು ಈ ಕಾಲೇಜಿನ ಎಲ್ಲ ಹಣಕಾಸು ವ್ಯವಹಾರಗಳನ್ನು ಉನ್ನತ ಶಿಕ್ಷಣ ಪರಿಷತ್ತಿನ ವ್ಯಾಪ್ತಿಗೆ ತಂದಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲದೇ ಇದ್ದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಹಣವನ್ನು ಉಪಯೋಗಿಸುವ ಕಾರಣಕ್ಕಾಗಿ ಈ ಕಾಲೇಜನ್ನು ಪರಿಷತ್ತಿನ ವ್ಯಾಪ್ತಿಗೆ ತರಲಾಗಿದೆ ಎಂದು ದೂರಿದರು.

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಮೊದಲು ನಿವೃತ್ತ ಐಎಎಸ್ ಅಧಿಕಾರಿ ಅನೂಪ್ ಪೂಜಾರಿಯನ್ನು ನೇಮಕ ಮಾಡಲಾಗಿತ್ತು. ಕಾಯ್ದೆ ಅಥವಾ ಆದೇಶದ ಪ್ರತಿ ಇಲ್ಲದೇ ಹಾಗೂ ಅಧಿಕಾರದ ಹಸ್ತಾಂತರದ ಯಾವುದೇ ಆದೇಶ ಇಲ್ಲದೇ ಹಣವನ್ನು ನಿರ್ವಹಿಸಲು ಒಪ್ಪದ ಈ ಅಧಿಕಾರಿಯನ್ನು ಆಗಸ್ಟ್ ತಿಂಗಳಲ್ಲಿ ತೆಗೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಂಪುಟದ ಒಪ್ಪಿಗೆ ಇಲ್ಲದೆ ಉನ್ನತ ಶಿಕ್ಷಣ ಪರಿಷತ್ತು 90 ಕೋಟಿ ರೂ.ಗಳ ಸಂಸ್ಥೆಯ ಕಟ್ಟಡ ಕಾಮಗಾರಿಗಳನ್ನು 149 ಕೋಟಿ ರೂ.ಗಳಿಗೆ ಕೆಎಚ್‌ಬಿಗೆ ನೀಡಲು ಅನುಮೋದನೆ ನೀಡಿದೆ. ಮತ್ತು ಈ ಕಾಮಗಾರಿಗೆ 190 ಕೋಟಿ ರೂ.ಗಳಿಗೆ ಅಂದಾಜು ಪಟ್ಟಿ ತಯಾರು ಮಾಡಲಾಗಿದೆ ಎಂದರು.

ಸೆಪ್ಟಂಬರ್ ತಿಂಗಳಲ್ಲಿ ನಡೆದಿರುವ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಕಾನೂನಿಗೆ ವಿರುದ್ಧವಾಗಿ ಇತರೆ ವಿಷಯಗಳಲ್ಲಿ ಕಟ್ಟಡ ಕಾಮಗಾರಿಯ ವಿಷಯವನ್ನು ಹೆಚ್ಚುವರಿಯಾಗಿ ಸೇರಿಸಿ ಅನುಮೋದನೆ ನೀಡಲಾಗಿದೆ. ಇಡೀ ಅಕ್ರಮವು ಉನ್ನತ ಶಿಕ್ಷಣ ಸಚಿವರ ನಿರ್ದೇಶನಕ್ಕೆ ಅನುಗುಣವಾಗಿ ನಡೆದಿದೆ. ಸಚಿವ ಸಂಪುಟದ ಅನುಮೋದನೆ ಇಲ್ಲದೆ ಹಣಕಾಸು ವೆಚ್ಚಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳಿದರು.

10 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಲು ಸಂಪುಟ ಸಭೆ ಹಾಗೂ ಆರ್ಥಿಕ ಇಲಾಖೆಯ ಅನುಮೋದನೆ ಅಗತ್ಯ. ನಿಯಮಗಳನ್ನು ಗಾಳಿಗೆ ತೂರಿ, ಸಂಬಂಧಪಟ್ಟ ಅಧಿಕಾರಿಗಳು ಬರೆದಿರುವ ಪತ್ರಗಳನ್ನು ಮತ್ತು ಟಿಪ್ಪಣಿಗಳನ್ನು ಉಲ್ಲಂಘನೆ ಮಾಡಿ ಕೆಎಚ್‌ಬಿ ಮುಖಾಂತರ ಟೆಂಡರ್‌ಗಳಿಗೆ ಅವಕಾಶ ನೀಡಿ ಅಕ್ರಮಗಳನ್ನು ಎಸಗಲಾಗಿದೆ. ವಿಶೇಷವಾಗಿ ಅಲ್ಪಾವಧಿ ಟೆಂಡರ್ ಮಾಡುವುದರ ಮೂಲಕ ಹಣದ ದುರುಪಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರಮೇಶ್‌ಬಾಬು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News