ಮೂವರು ಆರೋಪಿಗಳಿಗೆ 10 ವರ್ಷ ಜೈಲು: ಹೈಕೋರ್ಟ್
ಬೆಂಗಳೂರು, ಅ.27: ಅನುರಾಧ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ದಂಡುಪಾಳ್ಯದ ಹಂತಕರಿಗೆ ಕೆಳನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮಾರ್ಪಾಡುಗೊಳಿಸಿ ಮೂವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಒಬ್ಬರನ್ನು ಪ್ರಕರಣದಿಂದ ಮುಕ್ತಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಈ ಕೊಲೆ ಪ್ರಕರಣದ ವಿಚಾರಣೆ ನಡೆಸಿದ 34ನೆ ಎಸಿಎಂಎಂ ವಿಶೇಷ ನ್ಯಾಯಾಲಯ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಆದೇಶ ರದ್ದುಕೋರಿ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ಹಾಗೂ ಶಿಕ್ಷೆ ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.
ವಿಚಾರಣೆ ವೇಳೆ, ಆರೋಪಿಗಳ ವಿರುದ್ಧ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವುದರಿಂದ ಕೆಳನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಮಾರ್ಪಾಡುಗೊಳಿಸಿದ ಹೈಕೋರ್ಟ್, ವೆಂಕಟೇಶ್, ಮುನಿಕೃಷ್ಷ ಹಾಗೂ ನಲ್ಲತಿಮ್ಮ ಎಂಬ ಮೂವರು ಹಂತಕರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದಲ್ಲದೇ, ಪ್ರಕರಣದಲ್ಲಿ ಲಕ್ಷ್ಮೀಯ ಪಾತ್ರವಿಲ್ಲವೆಂದು ಅಭಿಪ್ರಾಯಪಟ್ಟ ಪೀಠ ಅವರನ್ನು ಆರೋಪಮುಕ್ತರನ್ನಾಗಿ ಮಾಡಿ ಆದೇಶಿಸಿತು.
ದಂಡುಪಾಳ್ಯ ಹಂತಕರು, 2000ರಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುರಾಧ ಎಂಬ ಮಹಿಳೆಯನ್ನು ಕೊಲೆಗೈದು, ಅತ್ಯಾಚಾರವೆಸಗಿ ನಂತರ ಅವಳ ಮೈಮೇಲಿನ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು.
ಈ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ 34ನೆ ಎಸಿಎಂಎಂ ವಿಶೇಷ ನ್ಯಾಯಾಲಯ ನಾಲ್ವರಿಗೂ ಗಲ್ಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.