×
Ad

ಸಾಲ ಪಡೆದು ವಂಚನೆ ಪ್ರಕರಣ: ಇಬ್ಬರ ಬಂಧನ

Update: 2017-10-27 22:21 IST

ಮೈಸೂರು, ಅ.27: ಗ್ರಾಹಕರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಬಜಾಜ್ ಫೈನಾನ್ಸ್ ನಿಂದ ಸಾಲ ಪಡೆದು ವಂಚಿಸಿದ ಇಬ್ಬರನ್ನು ಎನ್.ಆರ್. ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳಿಂದ ಒಂದು ಲಕ್ಷ ರೂ. ಬೆಲೆಬಾಳುವ ಇಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾಗ್ಯರಾಜ್ ಮತ್ತು ಜೆಸ್ಟೀನ್ ಎಂಬವರು ಮೈಸೂರಿನ ಎನ್.ಆರ್ ಮೊಹಲ್ಲಾ ಶಿವಾಜಿ ರಸ್ತೆಯಲ್ಲಿ ರಾಜ್ಸ್ ಇಲೆಕ್ಟ್ರಾನಿಕ್ಸ್ ಶಾಪಿ ಎಂಬ ಹೆಸರಿನ ಅಂಗಡಿ ತೆರೆದು, ಖರೀದಿ ಮಾಡುವ ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಲೋನ್ ಕೊಡುವುದಾಗಿ ಗ್ರಾಹಕರಿಂದ ದಾಖಲೆಗಳನ್ನು ಪಡೆದು ನಂತರ ಬಜಾಜ್ ಫೈನಾನ್ಸ್ ಕಂಪೆನಿಯವರಿಂದ ಸಾಲ ಪಡೆದು ಈ ಸಾಲದ ಹಣವನ್ನು ಗ್ರಾಹಕರಿಗೆ ನೀಡದೇ ತನ್ನ ಸ್ವಂತಕ್ಕೆ ಖರ್ಚು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈವರೆಗೆ ಸುಮಾರು 25 ಲಕ್ಷ ರೂ. ಹಣವನ್ನು ವಂಚಿಸಿದ ಬಗ್ಗೆ ಇದೇ ತಿಂಗಳ 24 ರಂದು ಬಜಾಜ್ ಫೈನಾನ್ಸ್ ಕಂಪನಿಯವರು ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ಕೈಗೊಂಡ ನರಸಿಂಹರಾಜ ಪೊಲೀಸರು ಅ.25ರಂದು ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳಾದ ಮೈಸೂರಿನ  ಜೆಪಿ ನಗರದ 33 ವರ್ಷದ ಭಾಗ್ಯರಾಜ್ ಬಿನ್ ಅಂಥೋಣಿ, ಎನ್.ಆರ್.ಮೊಹಲ್ಲಾದ 22 ವರ್ಷದ ಜೆಸ್ಟಿನ್ ಬಿನ್ ಲೇಟ್ ಸೋಮಣ್ಣ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಚಾರಣೆ ವೇಳೆ ಅಂಗಡಿಯ ಮಾಲೀಕ ಭಾಗ್ಯರಾಜ್ ಮತ್ತು ಕೆಲಸಗಾರ ಜೆಸ್ಟಿನ್ ಅವರುಗಳು ಗ್ರಾಹಕರ ದಾಖಲೆಗಳನ್ನು ಬಜಾಜ್ ಫೈನಾನ್ಸ್‍ಗೆ ಕೊಟ್ಟು ಬಂದ ಸಾಲದ ಹಣವನ್ನು ಸ್ವಂತಕ್ಕೆ ಖರ್ಚು ಮಾಡಿಕೊಂಡು, ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡಿರುವ ಬಗ್ಗೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಬಜಾಜ್ ಫೈನಾನ್ಸ್‍ಗೆ ನೀಡಿ ಮೋಸ ಮಾಡಿರುವ ಬಗ್ಗೆ ತಿಳಿದು ಬಂದಿರುತ್ತದೆ. ಈ ರೀತಿ ಮೋಸ ಮಾಡಿರುವ ಸ್ವಲ್ಪ ಹಣದಲ್ಲಿ ಅಂಗಡಿಯಲ್ಲಿ ಮಾರಾಟ ಮಾಡಲು ಕೆಲವು ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡಿರುವ ಬಗ್ಗೆ ತಿಳಿಸಿದ್ದರ ಮೇರೆಗೆ ಮೋಸ ಮಾಡಿ ಅಂಗಡಿಯಲ್ಲಿ ಮಾರಾಟಕ್ಕಾಗಿ ಖರೀದಿ ಮಾಡಿದ್ದ ಸುಮಾರು ಒಂದು ಲಕ್ಷ ರೂ. ಮೌಲ್ಯದ ವಿವಿಧ ಗೃಹೋಪಯೋಗಿ ವಸ್ತುಗಳನ್ನು ವಶಪಡಿಸಿಕೊಡಿಸಿಕೊಂಡಿದ್ದಾರೆ.

ನರಸಿಂಹರಾಜ ವಿಭಾಗದ ಎ.ಸಿ.ಪಿ. ಉಮೇಶ್ ಜಿ ಸೇಠ್ ಅವರ ನೇತೃತ್ವದಲ್ಲಿ ನರಸಿಂಹರಾಜ ಪೊಲೀಸ್ ಠಾಣೆಯ ಇನ್ ಸ್ಪೆಪೆಕ್ಟರ್ ಅಶೋಕ್‍ಕುಮಾರ್.ಟಿ, ಸಿಬ್ಬಂದಿಗಳಾದ ರಮೇಶ, ಮಂಜುನಾಥ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News