ಪತ್ನಿಯ ಮೊಬೈಲ್ ನಂಬರ್ ಹಂಚಿದ ಟೆಕ್ಕಿಯ ಬಂಧನ
ಬೆಂಗಳೂರು, ಅ.27: ತನ್ನ ಪತ್ನಿಯ ಪೋಟೊ ಮತ್ತು ಮೊಬೈಲ್ ನಂಬರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಆರೋಪದ ಮೇಲೆ ಸಾಫ್ಟ್‌ವೇರ್ ಇಂಜಿನಿಯರ್(ಟೆಕ್ಕಿ)ನನ್ನು ಬಂಧಿಸಿ ಮೊಬೈಲ್, ಲ್ಯಾಪ್‌ಟಾಪ್ ವಶಕ್ಕೆ ಪಡೆಯುವಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೊರಬ ತಾಲೂಕಿನ ಹರಿಶಿ ಗ್ರಾಮದ ಹರ್ಷವರ್ಧನ್ ಭಟ್(31) ಬಂಧಿತ ಆರೋಪಿಯಾಗಿದ್ದು, ಈತ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ: ಸೆ.11ರಂದು ಹರ್ಷವರ್ಧನ್ ಭಟ್ ತನ್ನ ಇ-ಮೇಲ್ ಖಾತೆ ಬಳಸಿ ಕನ್ನಡ ಮ್ಯಾಟರಿಮೋನಿ ಮತ್ತು ಡೇಟಿಂಗ್ ಆಫ್‌ಗಳಿಗೆ ಫೋಟೊ ಮತ್ತು ಮೊಬೈಲ್ ಸಂಖ್ಯೆ ಹಾಕಿ ಮಾನಸಿಕ ಕಿರುಕುಳ ನೀಡುತ್ತೀರುವುದಾಗಿ ಆರೋಪಿಸಿ ರಮ್ಯಾ ರಾಮಚಂದ್ರ ಭಟ್ ಎಂಬವರ ಪತಿ ಬೆಂಗಳೂರಿನ ಸೈಬರ್ ಕ್ರೈಂ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ನ್ಯಾಯಾಂಗದಲ್ಲಿ ದಾವೆ ಹೂಡಿದ್ದಾರೆ. ಈ ಬಗ್ಗೆ ಪೂರಕವಾಗಿ ಧಕ್ಕೆ ತರುವ ಉದ್ದೇಶದಿಂದ ಈ ಕೃತ್ಯ ನಡೆಸಿರುವುದಾಗಿ ತಿಳಿದು ಬಂದಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಸೈಬರ್ ಪೊಲೀಸ್ ಠಾಣೆಯ ಪಿಐ ಯಶವಂತ್ ಕುಮಾರ್, ವಿನುತಾ ಎಸ್. ಎಎಸ್ಸೈ ಮಲ್ಲೇಶ್, ಪುಟ್ಟಸ್ವಾಮಿಗೌಡ, ಶೋಭಾರಾಣಿ, ನುಸ್ರತ್ ಭಾಗವಹಿಸಿದ್ದರು.