ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ವತಿಯಿಂದ ಉಚಿತ ವೈದ್ಯಕೀಯ ಶಿಬಿರ

Update: 2017-10-28 08:44 GMT

ದಮಾಮ್, ಅ.28: ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಇಲ್ಲಿನ ಜುಬೈಲ್ ಕೈಗಾರಿಕಾ ನಗರದಲ್ಲಿರುವ 'ಜಾಲ್ ಇಂಟರ್ ನ್ಯಾಶನಲ್ ಕಂಪೆನಿಯ ಕಾರ್ಮಿಕರ ಕ್ಯಾಂಪ್ ನಲ್ಲಿ ಶಿಫಾ ಮೆಡಿಕಲ್ ಸೆಂಟರ್ ಸಹಯೋಗದೊಂದಿಗೆ ಇತ್ತೀಚೆಗೆ ವೈದ್ಯಕೀಯ ಶಿಬಿರ ಆಯೋಜಿಸಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಮ್ (ಐಎಸ್ಎಫ್) ಜುಬೈಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇರ್ಶಾದ್ ಬಜ್ಪೆ, ಕಳೆದ ಹಲವಾರು ವರ್ಷಗಳಿಂದ ಅನಿವಾಸಿ ಭಾರತೀಯರಿಗಾಗಿ ಐಎಸ್ಎಫ್ ನಡೆಸಿರುವ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ವಿವರಿಸಿದರು.  ಅಪಘಾತ, ಜೈಲು ಶಿಕ್ಷೆ ಪ್ರಕರಣ, ಕಾರ್ಮಿಕ ಸಮಸ್ಯೆ, ಸಾವು ಪ್ರಕರಣ ಮತ್ತು ರಕ್ತದಾನ ಸೇರಿದಂತೆ ಅನಿವಾಸಿ ಭಾರತೀಯರು ಎದುರಿಸುವ ಸಮಸ್ಯೆಗಳಿಗೆ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಐಎಸ್ಎಫ್ ಪರಿಹರಿಸುತ್ತಿದೆ. ಪ್ರಸಕ್ತ  ಚಾಲ್ತಿಯಲ್ಲಿರುವ ಆಮ್ನೆಸ್ಟಿ (ಕ್ಷಮಾದಾನ) ಕಾರ್ಯಕ್ರಮದಲ್ಲಿ ಐಎಸ್ಎಫ್ ಕಾರ್ಯಕರ್ತರು ಸ್ವಯಂಸೇವಕರಾಗಿ ರಾಯಭಾರಿ ಕಚೇರಿಯೊಂದಿಗೆ ಕೈಜೋಡಿಸಿದ್ದಾರೆ. ಈ ಬಗ್ಗೆ ಅನಿವಾಸಿ ಭಾರತೀಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನೂ  ಐಎಸ್ಎಫ್ ನಡೆಸಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಕಂಪೆನಿಯ ಕ್ಯಾಂಪ್ ಮೇಲ್ವಿಚಾರಕ ರಘುತ್ತಮ್ ರೆಡ್ಡಿ, ಜುಬೈಲ್ ಶಿಫಾ ಮೆಡಿಕಲ್ ನ ವೈದ್ಯ ಝಹೀರ್ ಅಹ್ಮದ್, ಐಎಸ್ಎಫ್ ಉಪಾಧ್ಯಕ್ಷ ಇಬ್ರಾಹೀಂ, ಶಿಬಿರ ಸಂಯೋಜಕ ಜಮಾಲ್ ಮುಂತಾದವರು ಉಪಸ್ಥಿತರಿದ್ದರು.

ಐಎಸ್ಎಫ್ ಜುಬೈಲ್ ಘಟಕ ಅಧ್ಯಕ್ಷ ಶಮೀರ್ ಸ್ವಾಗತಿಸಿದರು. ಸಮಿತಿಯ ಸದಸ್ಯ ಅನೀಸ್ ವಂದಿಸಿದರು. 

ಸುಮಾರು 150 ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News