ಕಂಪ್ಯೂಟರ್ ತಂತ್ರಾಂಶಗಳ ಪ್ರಾದೇಶೀಕರಣದ ಅಂಗವಾಗಿ ಭಾಷಾ ಹೊದಿಕೆಗಳನ್ನು ಹೊದ್ದ ತಂತ್ರಾಂಶಗಳು

Update: 2017-10-28 12:33 GMT

ಕಂಪ್ಯೂಟರಿನಲ್ಲಿ ಕನ್ನಡ ಪಠ್ಯವನ್ನು ಟೈಪ್‌ಮಾಡಿದರೆ, ನಾವು ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸುತ್ತಿದ್ದೇವೆ ಎನ್ನಬಹುದು. ಕಂಪ್ಯೂಟರ್ ನಮ್ಮೂಂದಿಗೆ ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಅನಿಸಿದರೆ, ಕಂಪ್ಯೂಟರಿನ ಸಂವಹನ ಭಾಷೆಯನ್ನಾಗಿ ಕನ್ನಡವನ್ನು ನಿಗದಿಪಡಿಸಿಕೊಳ್ಳಬೇಕು.

ಅಂದರೆ, ಕನ್ನಡ ಆವೃತ್ತಿಯ ಒ.ಎಸ್.ಗಳು ಮತ್ತು ಅಪ್ಲಿಕೇಷನ್ ತಂತ್ರಾಂಶಗಳನ್ನು ಅನುಸ್ಥಾಪಿಸಿಕೊಳ್ಳಬೇಕು ಅಥವಾ ಇರುವ ವಿಂಡೋಸ್ ಒ.ಎಸ್. ಮತ್ತು ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶಗಳಿಗೆ ‘ಕನ್ನಡದ ಭಾಷಾ ಹೊದಿಕೆ’, ಅಂದರೆ, ಕನ್ನಡ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ನ್ನು (ಎಲ್.ಐ.ಪಿ) ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಇಂತಹ ಎಲ್.ಐ.ಪಿ.ಗಳ ಅಳವಡಿಕೆಯಿಂದಾಗಿ ಕಂಪ್ಯೂಟರ್ ತನ್ನ ಬಳಕೆದಾರರೊಂದಿಗೆ ಕನ್ನಡದಲ್ಲಿಯೇ ಸಂವಹನವನ್ನು ನಡೆಸುತ್ತದೆ. ಇಂಗ್ಲಿಷ್‌ನ ‘ಓಪನ್’ ಎಂಬುದು ‘ತೆರೆ’, ‘ಕ್ಲೋಸ್’ ಎಂಬುದು ‘ಮುಚ್ಚು’, ‘ಎಕ್ಸಿಟ್’ ಎಂಬುದು ‘ನಿರ್ಗಮಿಸು ಇತ್ಯಾದಿಗಳಾಗಿ ಬದಲಾಗುತ್ತವೆ. ‘‘ಸಿದ್ಧಗೊಂಡ ಕಡತವನ್ನು ಉಳಿಸಬೇಕೆ? ಎಂದು ಕಂಪ್ಯೂಟರ್ ಕೇಳಿದಾಗ ‘ಹೌದು ಅಥವಾ ‘ಇಲ್ಲ ಎಂಬ ಕನ್ನಡದಲ್ಲಿರುವ ಬಟನ್‌ಗಳನ್ನು ಕ್ಲಿಕ್‌ಮಾಡುವ ಮೂಲಕ ನಾವು ಕಂಪ್ಯೂಟರಿಗೆ ಉತ್ತರಿಸಬಹುದು! ಕಂಪ್ಯೂಟರ್ ತಂತ್ರಾಂಶದ ‘ಮೆನು ಬಾರ್ ಮತ್ತು ‘ಮೆನು ಐಟಂಗಳು ಸಂಪೂರ್ಣವಾಗಿ ಕನ್ನಡದಲ್ಲಿಯೇ ಇರುತ್ತವೆ. ಇಂತಹ ಪರಿಸರಕ್ಕೆ ಕಂಪ್ಯೂಟರ್ ಕಾರ್ಯಾಚರಣೆಯ ಕನ್ನಡೀಕರಣ ಎನ್ನುತ್ತೇವೆ. ಬಳಕೆದಾರರೊಂದಿಗೆ ಕನ್ನಡದಲ್ಲಿ ಮಾತನಾಡುವುದನ್ನು ಆಗು ಮಾಡಿರುವುದೇ ಈ ‘ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳು. ಇನ್ನು ಅಪ್ಲಿಕೇಷನ್ ತಂತ್ರಾಂಶ ಸಿದ್ಧಪಡಿಸುವಾಗಲೇ ಸಂವಹನ ಭಾಷೆ ಕನ್ನಡವಾಗಿರುವಂತೆ ಸಿದ್ಧಪಡಿಸುವುದು ಸಾಧ್ಯ. ಅದಕ್ಕೆ ಒಂದು ಸರಳ ಉದಾಹರಣೆ ಎಂದರೆ ಕನ್ನಡದ ‘ನುಡಿ’ ತಂತ್ರಾಂಶ.

ಕಂಪ್ಯೂಟರ್ ತಂತ್ರಜ್ಞಾನದ ಆರಂಭಿಕ ದಿನಗಳಲ್ಲಿ ಕಂಪ್ಯೂಟರ್‌ನ ಕಾರ್ಯಾಚರಣೆ ವ್ಯವಸ್ಥೆಯು ಇಂಗ್ಲಿಷ್ ಭಾಷೆಯಲ್ಲಿಯೇ ಇತ್ತು. ಕಾಲಕ್ರಮೇಣ, ಇಂಗ್ಲಿಷ್‌ನಲ್ಲಷ್ಟೇ ಅಲ್ಲದೆ, ಕಂಪ್ಯೂಟರ್ ಕಾರ್ಯಾಚರಣೆ ವ್ಯವಸ್ಥೆಗಳು ಇತರ ಜಾಗತಿಕ ಭಾಷೆಗಳಾದ ಫ್ರೆಂಚ್, ಚೀನಿ, ಜಪಾನಿ, ಸ್ಪಾನಿಶ್ ಮತ್ತು ಕೊರಿಯನ್ ಮುಂತಾದ ಭಾಷೆಗಳಲ್ಲಿ ಬಳಕೆಗೆ ಬಂದವು. ಅಂತಹ ಭಾಷಾ ಕಾರ್ಯಾಚರಣೆ ವ್ಯವಸ್ಥೆಗಳ ಮೇಲೆ ಕಾರ್ಯನಿರ್ವಹಿಸುವ ಪ್ರಸಿದ್ಧ ತಂತ್ರಾಂಶ ತಯಾರಕರ ಆನ್ವಯಿಕ ತಂತ್ರಾಂಶಗಳೂ ಇಂದು ಆಯಾಯ ಭಾಷೆಗಳಲ್ಲಿ ತಮ್ಮದೇ ಸಾಂಸ್ಕೃತಿಕ ಮತ್ತು ಭಾಷಾಶಾಸ್ತ್ರೀಯ ವೈಶಿಷ್ಟ್ಯಗಳೊಂದಿಗೆ ಬಳಕೆಗೆ ಬಂದಿವೆ. ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಈಗ ತಮ್ಮ ಎಲ್ಲಾ ರೀತಿಯ ತಂತ್ರಾಂಶಗಳನ್ನು ಪ್ರಾದೇಶೀಕರಣಗೊಳಿಸಲು ಆರಂಭಿಸಿದ್ದಾರೆ.

ತಂತ್ರಾಂಶಗಳ ಪ್ರಾದೇಶೀಕರಣ ಎಂದರೆ ಕೇವಲ ಭಾಷಾ ಲಿಪಿಗಳನ್ನು ಅಳವಡಿಸುವುದಷ್ಟೇ ಅಲ್ಲ, ಭಾಷಾ ಲಿಪಿ ಬಳಕೆಯ ಸೌಲಭ್ಯದೊಂದಿಗೆ, ಸ್ಥಳೀಯರು ಬಳಸುವ ಅಂಕಿಗಳು ಮತ್ತು ದಿನಾಂಕಗಳ ಸ್ವರೂಪ ಎಲ್ಲವನ್ನೂ ಸಹ ಆಯಾಯ ಪ್ರದೇಶಗಳು ಮತ್ತು ಭಾಷೆಗೆ ಅನುಗುಣವಾಗಿ ರೂಪಿಸಿ ನೀಡುವುದು. ಈ ಪ್ರಾದೇಶಿಕರಣದ ಮೂಲ ಉದ್ದೇಶವೇನೆಂದರೆ ಇಂಗ್ಲಿಷೇತರರಿಗೂ ಸಹ ತಂತ್ರಾಂಶಗಳನ್ನು ಮಾರಾಟ ಮಾಡುವುದು ಮತ್ತು ಆ ಮೂಲಕ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದು. ಈ ಉದ್ದೇಶಗಳಿಗೆ ಅನುಗುಣವಾಗಿ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ತಮ್ಮ ತಂತ್ರಾಂಶಗಳಿಗೆ ಭಾಷಾ ಹೊದಿಕೆಗಳನ್ನು ಅಳವಡಿಸುವ ಮೂಲಕ, ಸ್ಥಳೀಯ ಬಳಕೆದಾರರ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ತಂತ್ರಾಂಶಗಳನ್ನು ಪ್ರಾದೇಶಿಕರಿಸಿ ನೀಡಿದ್ದಾರೆ. ಈ ಪ್ರಾದೇಶೀಕರಣದ ಅಂಗವಾಗಿ, ಭಾಷಾ ಹೊದಿಕೆಗಳನ್ನು ಹೊದ್ದು ತಂತ್ರಾಂಶಗಳು ಈಗ ಭಾರತೀಯ ಭಾಷೆಗಳಲ್ಲಿಯೂ ಲಭ್ಯವಾಗಿವೆ. ಕಾರ್ಯಾಚರಣೆ ವ್ಯವಸ್ಥೆಗಳಿಗೆ ಮತ್ತು ಆನ್ವಯಿಕ ತಂತ್ರಾಂಶಗಳಿಗೆ ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳನ್ನು (ಎಲ್.ಐ.ಪಿ) ತಯಾರಿಸಿ ನೀಡಲಾಗಿದೆ. ಈ ಪ್ಯಾಕ್‌ಗಳನ್ನು ಅನುಸ್ಥಾಪಿಸಿಕೊಳ್ಳುವ ಮೂಲಕ ಕಂಪ್ಯೂಟರಿನ ಸಂವಹನ ಭಾಷೆಯನ್ನು (ಇನ್‌ಸ್ಟಾಲ್) ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು. ಮೈಕ್ರೋಸಾಫ್ಟ್ ಕಂಪೆನಿಯು ತನ್ನ ಕಾರ್ಯಾಚರಣೆ ವ್ಯವಸ್ಥೆಯಾದ ‘ವಿಂಡೋಸ್’ ಮತ್ತು ಅಪ್ಲಿಕೇಷನ್ ಸಾಫ್ಟ್‌ವೇರ್ ಆದ ‘ಎಂ.ಎಸ್.ಆಫೀಸ್’ಗೆ ಕನ್ನಡ ಭಾಷೆಯ ಎಲ್.ಐ.ಪಿ.ಯನ್ನು ಸಿದ್ಧಪಡಿಸಿ ನೀಡಿದೆ.

ಕನ್ನಡದ ಎಲ್.ಐ.ಪಿ.ಯನ್ನು ಭಾಷಾ ಇಂಡಿಯಾ ಜಾಲತಾಣಕ್ಕೆ (www.bhashaindia.com) ಹೋಗಿ ಡೌನ್‌ಲೋಡ್ ಮಾಡಿಕೊಂಡು, ನಂತರ, ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿ ಬಳಸಬಹುದು. ಆದರೆ, ಕಂಪ್ಯೂಟರಿನ ಸಂವಹನ ಭಾಷೆಯಾಗಿ ಎಲ್ಲರಿಗೂ ಇಂಗ್ಲಿಷ್ ರೂಢಿಯಾಗಿರುವುದರಿಂದ ಇಂತಹ ಎಲ್.ಐ.ಪಿ.ಗಳನ್ನು ಅನುಸ್ಥಾಪಿಸಿಕೊಳ್ಳುವ ಕೆಲಸಕ್ಕೆ ಹೆಚ್ಚಿನವರು ಕೈಹಾಕಿದಂತೆ ಕಾಣುವುದಿಲ್ಲ. ಇಂಗ್ಲಿಷ್ ತಿಳಿಯದಿರುವ ಕಂಪ್ಯೂಟರ್ ಬಳಕೆದಾರರು ಅತಿ ವಿರಳ. ಹೀಗಾಗಿ, ಇಂತಹ ಎಲ್.ಐ.ಪಿ.ಗಳು ಹೆಚ್ಚಾಗಿ ಬಳಕೆಗೆ ಬಂದಿಲ್ಲ ಎನ್ನಬಹುದು. ಕಂಪ್ಯೂಟರಿನಲ್ಲಿ ಕನ್ನಡವನ್ನು ಟೈಪ್‌ಮಾಡಿ ಬಳಸಿಕೊಂಡರಷ್ಟೇ ಸಾಕು. ಇನ್ನು, ಕಂಪ್ಯೂಟರ್ ಬಳಕೆದಾರರಾದ ನಮ್ಮೂಂದಿಗೆ ಕನ್ನಡದಲ್ಲಿಯೇ ಮಾತನಾಡಬೇಕು ಎಂಬ ಕಡ್ಡಾಯವೇನಿಲ್ಲ ಎಂಬ ಮನೋಧೋರಣೆ ನಮಗಿದ್ದರೆ, ಆಗ ಎಲ್.ಐ.ಪಿ.ಯ ಅಗತ್ಯವಿಲ್ಲ, ಅಷ್ಟೇ!. ಕಂಪ್ಯೂಟರ್‌ನ ಸಂವಹನ ಭಾಷೆಯ ಹಿನ್ನೆಲೆ ಏನು ಎಂಬುದನ್ನು ತಿಳಿಯೋಣ. ಕೆಲಸಕಾರ್ಯಗಳನ್ನು ಅಗತ್ಯಕ್ಕೆ ತಕ್ಕಂತೆ ನಿರ್ವಹಿಸಲು ಕಂಪ್ಯೂಟರಿನಲ್ಲಿ ‘ಕಾರ್ಯಾಚರಣೆ ವ್ಯವಸ್ಥೆ, ಆನ್ವಯಿಕ ತಂತ್ರಾಂಶ ಮತ್ತು ‘ಬಳಕೆದಾರ ಈ ಮೂವರಲ್ಲಿ ಪರಸ್ಪರರ ನಡುವೆ, ಸಂವಾದ, ಸಂಪರ್ಕ, ಸ್ಪಂದನ ಮತ್ತು ವ್ಯವಹಾರಗಳು ನಡೆಯುತ್ತವೆ. ಬಳಕೆದಾರನು ಬಯಸುವ ಕೆಲಸಕಾರ್ಯಗಳನ್ನು ನಿರ್ವಹಿಸಲು ಕಂಪ್ಯೂಟರು ತನ್ನ ಬಳಕೆದಾರನೊಂದಿಗೆ ಸಂವಾದಿಸುತ್ತದೆ, ಸಂಪರ್ಕಿಸುತ್ತದೆ, ಸ್ಪಂದಿಸುತ್ತದೆ ಮತ್ತು ವ್ಯವಹರಿಸುತ್ತದೆ.

ಇದನ್ನೆಲ್ಲಾ ಬಳಕೆದಾರ ವ್ಯಕ್ತಿಗಳೊಂದಿಗೆ ನಿರ್ವಹಿಸಲು ಕಂಪ್ಯೂಟರ್ ಸಹ ಬಳಕೆದಾರರ ಭಾಷೆಯನ್ನು ಉಪಯೋಗಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಬಳಕೆದಾರನೇ ಕಂಪ್ಯೂಟರಿನ ಭಾಷೆಯನ್ನು ಕಲಿತು ಅದರೊಂದಿಗೆ ಸಂವಹನ ನಡೆಸುತ್ತಾನೆ. ಅಂದರೆ, ಕಂಪ್ಯೂಟರು ಮತ್ತು ಬಳಕೆದಾರ ವ್ಯಕ್ತಿಗಳ ನಡುವೆ ಸಹಜ ಭಾಷೆಯೊಂದು ತನ್ನ ಪ್ರಾಮುಖ್ಯವನ್ನು ಸದಾಕಾಲ ಮೊೆೆಯುತ್ತದೆ ಎಂಬುದು ಇಲ್ಲಿ ಗಮನಾರ್ಹ ವಿಷಯ. ಕಂಪ್ಯೂಟರಿಗೆ ಸಹಜ ಭಾಷೆಯು ತಿಳಿಯುವುದಿಲ್ಲ. ಅದೊಂದು ವಿದ್ಯುನ್ಮಾನ ಯಂತ್ರವಾದ್ದರಿಂದ ಅದಕ್ಕೆ ಯಂತ್ರಭಾಷೆ ಮಾತ್ರ ತಿಳಿಯುತ್ತದೆ. ಆದರೆ, ಕಂಪ್ಯೂಟರ್ ಬಳಕೆದಾರರಿಗೆ ತಮ್ಮ ಸಹಜ ಭಾಷೆಯು ಮಾತ್ರ ತಿಳಿಯುತ್ತದೆ. ಇವೆರಡು ಭಾಷೆಗಳ ನಡುವೆ ಸಮನ್ವಯ ಕಾಯ್ದುಕೊಳ್ಳಲು ಇರುವ ಭಾಷೆಯೇ ‘ಉನ್ನತ ಸ್ತರ ಭಾಷೆ’ ಅಂದರೆ, ಹೈ-ಲೆವೆಲ್ ಲಾಂಗ್ವೇಜ್. ಇದನ್ನು ಬಳಸಿಯೇ ಕಂಪ್ಯೂಟರ್ ಇಂಜಿನಿಯರ್‌ಗಳು ಸಾವಿರಾರು ಪ್ರೋಗ್ರಾಂ ಬರೆದು ಒಂದು ತಂತ್ರಾಂಶವನ್ನು ಸಿದ್ಧಪಡಿಸುತ್ತಾರೆ.

  ತಂತ್ರಾಂಶಗಳಲ್ಲಿ ನಿಗದಿಪಡಿಸಿರುವ ಕೆಲಸ-ಕಾರ್ಯಗಳನ್ನು ನಿರ್ವಹಿಸುವಾಗ, ಅಗತ್ಯವಿದ್ದರೆ, ಅಗತ್ಯವಿದ್ದಾಗಲೆಲ್ಲಾ, ತನಗೆ ಬೇಕಾದ ಹೆಚ್ಚಿನ ಮಾರ್ಗದರ್ಶನ, ಸೂಚನೆಗಳನ್ನು ಕಂಪ್ಯೂಟರ್ ಬಳಕೆದಾರನಿಂದ ಪಡೆದು ಕಂಪ್ಯೂಟರ್ ತನ್ನ ಕೆಲಸವನ್ನು ಪೂರೈಸುತ್ತದೆ. ಇಂತಹ ಸೂಚನೆಗಳನ್ನು ಪಡೆಯಲು ಕಂಪ್ಯೂಟರ್ ಸಾಂದರ್ಭಿಕವಾದ ಸಂದೇಶಗಳನ್ನು ಬಳಕೆದಾರನಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಪ್ರಕಟಿಸುವ ಮೂಲಕ ಹೆಚ್ಚಿನ ಮಾರ್ಗದರ್ಶನ ಮತ್ತು ಸೂಚನೆಗಳನ್ನು ನಿರೀಕ್ಷಿಸುತ್ತದೆ. ಇದನ್ನು ‘ಟೆಕ್ಟ್ ಡಯಲಾಗ್ ಎಂದು ಕರೆಯಲಾಗಿದೆ.

ಕಂಪ್ಯೂಟರ್‌ನ ಜೀವನಾಡಿ ಮತ್ತು ಅಡಿಪಾಯವಾದ ಕಾರ್ಯಾಚರಣೆ ವ್ಯವಸ್ಥೆ ಮತ್ತು ಅಂತಹ ವ್ಯವಸ್ಥೆಯ ಮೇಲೆ ಕೆಲಸ ಮಾಡುವ ಆನ್ವಯಿಕ ತಂತ್ರಾಂಶಗಳು ಬಳಕೆದಾರನೊಂದಿಗೆ ಸಹಜ ಭಾಷೆಯಲ್ಲಿ ಹೀಗೆ ಸಂವಹನ ಮಾಡಿದರೆ ಬಳಕೆದಾರರಿಗೆ ಸಂತೋಷ ತರುವ ವಿಷಯವೇ ಸರಿ. ಹಾಗೆ ಕನ್ನಡದಲ್ಲಿಯೇ ಸಂವಹಿಸುವಂತೆ ನಿರ್ದೇಶಿಸಿ ತಂತ್ರಾಂಶಗಳನ್ನು ತಯಾರಿಸುವುದು ಇಂದು ಸವಾಲಿನ ಕೆಲಸವಾಗಿ ಉಳಿದಿಲ್ಲ. ಪ್ರತಿಯೊಬ್ಬ ಭಾಷಿಕ ಬಳಕೆದಾರನು ಕಂಪ್ಯೂಟರ್ ತನ್ನದೇ ಆದ ಭಾಷೆಯಲ್ಲಿ ಸಂವಹಿಸಬೇಕು ಎಂದು ಅಪೇಕ್ಷಿಸುವುದು ಸಹಜ. ಕಂಪ್ಯೂಟರ್ ವಿವಿಧ ಭಾಷೆಗಳಲ್ಲಿ ಸಂವಹನವನ್ನು ಮಾಡಲು ಶಕ್ತವಾಗುವಂತೆ ಬೇರೆ ಬೇರೆ ಭಾಷಾ ಆವೃತ್ತಿಗಳನ್ನು ಮತ್ತು ‘ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್’ಗಳನ್ನು ಸಿದ್ಧಪಡಿಸಿರುವುದು ಕಂಪ್ಯೂಟರ್ ಭಾಷಾ ತಂತ್ರಜ್ಞಾನದ ಮಹತ್ವದ ಮೈಲುಗಲ್ಲಾಗಿದೆ.

Writer - ಸತ್ಯನಾರಾಯಣ ಎ.

contributor

Editor - ಸತ್ಯನಾರಾಯಣ ಎ.

contributor

Similar News