ಕಲ್ಲಿದ್ದಲು ಹಂಚಿಕೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ತಾರತಮ್ಯ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಅ.28: ಕಲ್ಲಿದ್ದಲು ಪೂರೈಕೆಯಲ್ಲಿ ಕೇಂದ್ರ ಸರಕಾರವು ರಾಜ್ಯಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಇಂಧನ ಇಲಾಖೆ ಹಮ್ಮಿಕೊಂಡಿದ್ದ 'ಪವರ್ ಅವಾರ್ಡ್ಸ್-2017' ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಪೂರೈಕೆ ಮಾಡಿದರೆ, ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಈ ತಾರತಮ್ಯವನ್ನು ಬಿಟ್ಟು ಅಗತ್ಯವಿರುವ ಪ್ರಮಾಣದಲ್ಲಿ ಕಲ್ಲಿದ್ದಲನ್ನು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಕೃಷಿ ಮತ್ತು ಕೈಗಾರಿಕೆಗಳಿಗೆ ಅಗತ್ಯವಿರುವ ವಿದ್ಯುತ್ ಪೂರೈಸಿದಾಗ ಮಾತ್ರ ವಿದ್ಯುತ್‌ನಲ್ಲಿ ಸ್ವಾವಲಂಬನೆ ಹೊಂದಲು ಸಾಧ್ಯ. ಸಮಗ್ರ ಅಭಿವೃದ್ಧಿಗೂ ವಿದ್ಯುತ್ ಸ್ವಾವಲಂಬನೆ ಅಗತ್ಯ. ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಸರಕಾರ ಸ್ವಾವಲಂಬನೆ ಸಾಧಿಸಬೇಕಾದರೆ ಕೇಂದ್ರ ಸರಕಾರದ ಕೃಪಾಕಟಾಕ್ಷವೂ ಇರಬೇಕು. ರಾಜ್ಯಕ್ಕೆ ಅಗತ್ಯವಿರುವ ಕೊಲ್‌ಬ್ಲಾಕ್‌ಗಳನ್ನು ನೀಡಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು.
ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ದಾಪುಗಾಲಿಡುತ್ತಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 16 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಈ ಪ್ರಮಾಣ ಈಗ 24 ಸಾವಿರ ಮೆಗಾವ್ಯಾಟ್‌ಗೆ ಏರಿಕೆ ಆಗಿದೆ ಎಂದರು.
10 ಸಾವಿರ ಸಿಬ್ಬಂದಿ ನೇಮಕಾತಿಗೆ ಕ್ರಮ: ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಕೆಪಿಟಿಸಿಎಲ್‌ನ ಎಲ್ಲ ವಿಭಾಗಗಳಲ್ಲಿ 30 ಸಾವಿರ ಸಿಬ್ಬಂದಿ ಕೊರತೆಯಿತ್ತು. ನಾಲ್ಕು ವರ್ಷಗಳಲ್ಲಿ 22 ಸಾವಿರ ಸಿಬ್ಬಂದಿಯನ್ನು ಪಾರದರ್ಶಕವಾಗಿ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇನ್ನುಳಿದ ಆರು ತಿಂಗಳಲ್ಲಿ ಸುಮಾರು 10 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಆರು ತಿಂಗಳಲ್ಲಿ ಗ್ಯಾಸ್ ಪ್ಲ್ಯಾಂಟ್ ಉದ್ಘಾಟನೆ: ನಗರದ ಹೊರ ವಲಯ ಯಲಹಂಕದಲ್ಲಿ ಸುಮಾರು ಒಟ್ಟು 1,600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಗ್ಯಾಸ್ ವಿದ್ಯುತ್ ಘಟಕವನ್ನು ಆರು ತಿಂಗಳೊಳಗೆ ಲೋಕಾರ್ಪಣೆ ಮಾಡಲಾಗುವುದು ಈ ಘಟಕ ಉದ್ಘಾಟನೆಗೊಂಡರೆ ನಗರಕ್ಕೆ ವಿದ್ಯುತ್ ಕೊರತೆ ಕಾಡುವುದಿಲ್ಲ ಎಂದರು.
ಈ ವೇಳೆ ಇಂಧನ ಇಲಾಖೆಯಲ್ಲಿನ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸಿರುವ ರೈತರು, ಉದ್ಯಮಿಗಳು, ಗ್ರಾಹಕರು, ಟರ್ನ್‌ಕೀ ಏಜೆನ್ಸಿಗಳು ಮತ್ತು ನೌಕರರಿಗೆ ಪವರ್ ಅವಾರ್ಡ್ಸ್ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಆರ್.ರೋಷನ್‌ಬೇಗ್, ಕೆ.ಜೆ.ಜಾರ್ಜ್, ಟಿ.ಬಿ.ಜಯಚಂದ್ರ, ರಾಮಲಿಂಗಾರೆಡ್ಡಿ, ಎಚ್. ಆಂಜನೇಯ, ಎಂ.ಬಿ.ಪಾಟೀಲ್ ಸೇರಿದಂತೆ ಇತರರು ಇದ್ದರು.
ಪವರ್ ಮ್ಯಾನ್ ಬದಲು ‘ಶಕ್ತಿ ಮಿತ್ರ’
ಕೆಪಿಟಿಸಿಎಲ್‌ನಲ್ಲಿ ನಿರ್ವಹಿಸುತ್ತಿರುವ 44 ಸಾವಿರ ಲೈನ್‌ಮನ್‌ಗಳು ಇವತ್ತಿನಿಂದ ಪವರ್‌ಮನ್‌ಗಳು ಎಂದು ಸಚಿವ ಡಿ.ಕೆ.ಶಿವಕುಮಾರ್ ನಾಮಕರಣ ಮಾಡಿ ಘೋಷಣೆ ಮಾಡಿದರು.ಲೈನ್‌ಮನ್‌ಗಳಿಗೆ ಪವರ್‌ಮನ್‌ಗಳು ಎಂದು ಹೊಸದಾಗಿ ಆಂಗ್ಲ ಭಾಷೆಯಲ್ಲಿ ನಾಮಕರಣ ಮಾಡಿದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಯಾವದೋ ಕಾಲದಲ್ಲಿ ಮಾರ್ಗದಾಳುಗಳಿಗೆ ಆಂಗ್ಲಭಾಷೆಯಲ್ಲಿ ಲೈನ್‌ಮನ್‌ಗಳಾಗಿ ನಾಮಕಾರಣ ಮಾಡಲಾಗಿದೆ. ಈಗಲೂ ಆಂಗ್ಲ ಭಾಷೆಯಲ್ಲಿ ನಾಮಕರಣ ಮಾಡುವುದು ಬೇಡ. ಕನ್ನಡಲ್ಲೇ ಇಟ್ಟರೆ ಗೌರವ. ಇಂದಿನಿಂದ ಲೈನ್ ಮನ್‌ಗಳು ‘ಶಕ್ತಿ ಮಿತ್ರರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮರು ನಾಮಕರಣ ಮಾಡಿದರು.