×
Ad

ಟಿಪ್ಪು ಸುಲ್ತಾನನ ರಾಜನೀತಿ

Update: 2017-10-28 23:41 IST

ಆದೇಶ ಸಂಖ್ಯೆ 10

ಊರಿನ ಪಟೇಲ ಹೊಸ ರೈತರನ್ನು ನೇಮಿಸಿಕೊಂಡು ಅವರಿಗೆ ನೇಗಿಲು ನೀಡಿ ವ್ಯವಸಾಯ ಮಾಡಲು ತಕಾವಿ ಸಾಲಗಳನ್ನು ನೀಡಿ ಆಹಾರ ಧಾನ್ಯಗಳ ಉತ್ಪಾದನೆ ಆರಂಭಿಸುವಂತೆ ಪ್ರೋತ್ಸಾಹಿಸಬೇಕು. ಮೇಲಿನ ಆದೇಶದಂತೆ ಊರ ಪಟೇಲ ಸಾಲ ವಸೂಲಿ ಮಾಡುವಲ್ಲಿ ವಿಫಲವಾದರೆ ನಿಗದಿತ ದಂಡ ವಸೂಲಿಮಾಡಬೇಕು. ಕಟ್ಟಿರುವ ದಂಡವನ್ನು ಒಪ್ಪಂದವೆಂದು ಪರಿಗಣಿಸಿ ನಷ್ಟವನ್ನು ಅಮಿಲ್‌ನ ಮೂಲಕ ವಸೂಲಿ ಮಾಡಲಾಗುತ್ತದೆ.

ಆದೇಶ ಸಂಖ್ಯೆ 15

10 ವರ್ಷಗಳ ಕಾಲ ವ್ಯವಸಾಯ ಮಾಡದೆ ಇರುವ ಭೂಮಿಯನ್ನು ವ್ಯವಸಾಯ ಮಾಡುವ ಷರತ್ತಿನ ಮೇಲೆ ರೈತರಿಗೆ ವಿತರಿಸಬೇಕು. ಮೊದಲ ಎರಡು ವರ್ಷ ಅವರಿಗೆ ಯಾವುದೇ ಕಂದಾಯ ವಿಧಿಸಬಾರದು. ಮೂರನೆ ವರ್ಷದಿಂದ ವಾಡಿಕೆಯಂತೆ ಪೂರ್ಣಪ್ರಮಾಣದ ಕಂದಾಯವನ್ನು ವಸೂಲಿ ಮಾಡುವುದು. ರೈತರು ಬಂಜರು ಭೂಮಿ, ಸಮತಟ್ಟಾದ ಕಾಡು ಮತ್ತು ಬೆಟ್ಟದ ಸಮತಲಗಳಲ್ಲಿ ವ್ಯವಸಾಯ ಮಾಡಬೇಕು. ಇಂಥಾ ಜಮೀನಿನಲ್ಲಿ ವ್ಯವಸಾಯ ಮಾಡಿದವರಿಗೆ ಮೊದಲನೆ ವರ್ಷದ ತೆರಿಗೆಯಿಂದ ವಿನಾಯಿತಿ ನೀಡತಕ್ಕದ್ದು. ಎರಡನೆ ವರ್ಷ ಮಾಮೂಲಿ ತೆರಿಗೆಯ ನಾಲ್ಕನೆ ಒಂದು ಭಾಗವನ್ನೂ, ಮೂರನೆ ವರ್ಷ ಅರ್ಧದಷ್ಟು ಮಾಮೂಲಿ ತೆರಿಗೆಯನ್ನೂ ಮತ್ತು ನಾಲ್ಕನೆ ವರ್ಷ ಪೂರ್ಣ ತೆರಿಗೆಯನ್ನು ವಸೂಲಿ ಮಾಡತಕ್ಕದ್ದು.

ಆದೇಶ ಸಂಖ್ಯೆ 17

ಉತ್ಪಾದನೆಯ ಷರತ್ತಿನ ಮೇಲೆ ಜಮೀನು ಪಡೆದ ರೈತರು ಬೇಳೆ ಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಬೇಕು.

ಆದೇಶ ಸಂಖ್ಯೆ 18

ತಾಲೂಕಿನಲ್ಲಿ ಗೋಧಿ ಮತ್ತು ಇತರ ಧಾನ್ಯಗಳ ವ್ಯವಸಾಯದ ಕೊರತೆ ಇರುವುದರಿಂದ ಇದರ ಉತ್ಪಾದನೆಗೆ ಆದ್ಯತೆ ನೀಡತಕ್ಕದ್ದು. ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಮೊದಲ ಮೂರು ವರ್ಷ ತೆರಿಗೆಯು ಐದು ಹನ್‌ಗಳಷ್ಟಿರಬೇಕು. ಗೋಧಿ ಮತ್ತು ಇತರ ಆಹಾರ ಧಾನ್ಯಗಳ ಉತ್ಪಾದನೆ ಅತೀಹೆಚ್ಚಾದಂತೆ ನಾಲ್ಕನೆ ವರ್ಷದಿಂದ ಪೂರ್ಣ ಪ್ರಮಾಣದ ತೆರಿಗೆ ವಸೂಲಿ ಮಾಡತಕ್ಕದ್ದು. ಈಗಾಗಲೇ ಗೋಧಿ ಮತ್ತು ಇತರ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಿರುವ ಹಳ್ಳಿಗಳಲ್ಲಿ ರೈತರು ಉತ್ಪಾದನೆಯನ್ನು ಹೆಚ್ಚಿಸುವಂತೆ ಸೂಚಿಸತಕ್ಕದ್ದು.

Writer - ಡಾ॥ ಲಕ್ಷ್ಮೀಪತಿ.ಸಿ.ಜಿ

contributor

Editor - ಡಾ॥ ಲಕ್ಷ್ಮೀಪತಿ.ಸಿ.ಜಿ

contributor

Similar News