ಅ.30ರಿಂದ ರಾಜ್ಯ ಮಟ್ಟದ ಸಮುದಾಯ ಶೈಕ್ಷಣಿಕ ಸಮಾವೇಶ
ಬೆಂಗಳೂರು, ಅ.29: ‘ಸರಕಾರಿ ಶಾಲೆಗಳು ಉಳಿಯಲಿ, ಬೆಳೆಯಲಿ ಹಾಗೂ ನೆರೆಹೊರೆಯ ಸಮಾನ ಶಾಲೆಗಳಾಗಲಿ’ ಎಂಬ ಆಶಯದೊಂದಿಗೆ ಅ.30ರಿಂದ ಎರಡು ದಿನ ನಗರದ ಶಿಕ್ಷಕರ ಸದನದಲ್ಲಿ ರಾಜ್ಯ ಮಟ್ಟದ ಸಮುದಾಯದ ಶೈಕ್ಷಣಿಕ ಸಮಾವೇಶವನ್ನು ಮಗು ಮತ್ತು ಕಾನೂನು ಕೇಂದ್ರ ಹಾಗೂ ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ಆಯೋಜಿಸಿದೆ.
ಅ.30ರ ಬೆಳಗ್ಗೆ 9ಕ್ಕೆ ಬೆಂಗಳೂರು ನಗರ ರೈಲು ನಿಲ್ದಾಣದಿಂದ ಶಿಕ್ಷಕರ ಸದನದವರೆಗೆ ಮೆರವಣಿಗೆ ಆಯೋಜಿಸಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಚಾಲನೆ ನೀಡಲಿದ್ದಾರೆ. ಶಿಕ್ಷಕರ ಸದನದಲ್ಲಿ ನಡೆಯುವ ಸಮಾವೇಶಕ್ಕೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಚಾಲನೆ ನೀಡಲಿದ್ದಾರೆ. ಉದ್ಘಾಟನೆಯ ಸಮಾವೇಶದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಅಭಿವೃದ್ಧಿ ಆಯುಕ್ತ ವಿಜಯ್ ಭಾಸ್ಕರ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಭಾಗವಹಿಸಲಿದ್ದಾರೆ.
ಎರಡು ದಿನ ನಡೆಯುವ ಸಮಾವೇಶದಲ್ಲಿ ‘ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸ್ಥಿತಿಗತಿ: ಆರ್ಥಿಕವಾಗಿ ಹಿಂದುಳಿದ ಹಾಗೂ ಅವಕಾಶ ವಂಚಿತ ಮಕ್ಕಳ ಮೇಲೆ ಇದರ ಪರಿಣಾಮ’, ‘ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ಅನುಷ್ಟಾನ: ಸಾಧಕ- ಬಾಧಕಗಳು’, ‘ಶಾಲಾ ಶಿಕ್ಷಣದಲ್ಲಿ ಖಾಸಗೀಕರಣ ಮತ್ತು ವ್ಯಾಪಾರೀಕರಣ: ಆತಂಕ ಮತ್ತು ಪರ್ಯಾಯ’, ‘ಗುಣಾತ್ಮಕ ಶಿಕ್ಷಣಕ್ಕಾಗಿ ಸರಕಾರಿ ಶಾಲೆಗಳ ಸಬಲೀಕರಣದಲ್ಲಿ ಎಸ್‌ಡಿಎಂಸಿಗಳ ಪಾತ್ರ: ಸಾಧ್ಯತೆ ಮತ್ತು ಸವಾಲುಗಳು’ ಸೇರಿದಂತೆ ಹಲವು ವಿಷಯಗಳ ಕುರಿತು ನಡೆಯುವ ಸಂವಾದ ಗೋಷ್ಠಿಯಲ್ಲಿ ಶಿಕ್ಷಣ ತಜ್ಞರು ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.