×
Ad

ಚುನಾವಣೆಯ ನಿರೀಕ್ಷೆಯಲ್ಲಿ ಕರ್ನಾಟಕ ರಾಜ್ಯದ ಜನತೆ: ನರೇಂದ್ರ ಮೋದಿ

Update: 2017-10-29 18:37 IST

ಬೆಂಗಳೂರು, ಅ.29: ಕರ್ನಾಟಕ ರಾಜ್ಯದ ಜನತೆ ಮುಂಬರುವ ಚುನಾವಣೆಗಾಗಿ ಇನ್ನು ಹೆಚ್ಚು ಸಮಯ ಕಾಯಲು ಸಿದ್ಧರಿಲ್ಲ. ದೇಶದ ಇತರ ರಾಜ್ಯಗಳ ರೀತಿಯಲ್ಲಿ ಕರ್ನಾಟಕ ರಾಜ್ಯವೂ ಅಭಿವೃದ್ಧಿಯ ಯಾತ್ರೆಯಲ್ಲಿ ಸೇರಿಕೊಳ್ಳಲು ಕಾತರಿಸುತ್ತಿದೆ ಎಂದು ಹೇಳಿದ್ದಾರೆ. 

ರವಿವಾರ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆ ನಂತರ ಕರ್ನಾಟಕವು ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ಸಮ್ಮಿಲನಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಶ್ಮೀರಕ್ಕಾಗಿ ನಮ್ಮ ದೇಶದ ಸಾವಿರಾರು ಯೋಧರು ಬಲಿದಾನ ನೀಡಿದ್ದಾರೆ. ಪ್ರತಿ ಕ್ಷಣ ಮಾತೃಭೂಮಿಯ ರಕ್ಷಣೆಗಾಗಿ, ಕಾಶ್ಮೀರದ ಮುಗ್ಧ ಜನರ ರಕ್ಷಣೆಗಾಗಿ ಯೋಧರು ಬಲಿದಾನ ನೀಡುತ್ತಲೇ ಇದ್ದಾರೆ. ಆದರೆ, ನಿನ್ನೆಯವರೆಗೆ ಅಧಿಕಾರದಲ್ಲಿದ್ದವರು ಈಗ ಯೂಟರ್ನ್ ತೆಗೆದುಕೊಂಡು ಕಾಶ್ಮೀರದ ಸ್ವಾತಂತ್ರದ ಬಗ್ಗೆ ಮಾತನಾಡುತ್ತಿರುವುದು ನಾಚಿಕೆಗೇಡು ಎಂದು ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಯೋಧರ ಬಲಿದಾನವನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹವರಿಂದ ದೇಶದ ಉದ್ಧಾರ ಸಾಧ್ಯವೇ. ಪ್ರತ್ಯೇಕತವಾದಿಗಳು, ಪಾಕಿಸ್ತಾನದಲ್ಲಿ ಬಳಸುವಂತಹ ಭಾಷೆಯನ್ನು ಇಲ್ಲಿ ಪ್ರಯೋಗಿಸಲು ಕಾಂಗ್ರೆಸ್ ಮುಖಂಡರಿಗೆ ನಾಚಿಕೆಯಾಗುವುದಿಲ್ಲವೆ ಎಂದು ಕಿಡಿಕಾರಿದರು.

ಯಾವ ತಾಯಿ ತನ್ನ ಮಗನ, ಯಾವ ಸಹೋದರಿ ತನ್ನ ಸಹೋದರನ, ಯಾವ ಮಗು ತನ್ನ ತಂದೆಯ ಬಲಿದಾನವನ್ನು ನೀಡಿದ್ದಾರೋ ಅವರೆಲ್ಲರೂ ಇವರಿಗೆ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಕಾಂಗ್ರೆಸ್ ಮುಖಂಡರು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಲೇಬೇಕು ಎಂದು ಹೇಳಿದರು.

ಇದು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಭೂಮಿ. ಸರ್ಜಿಕಲ್ ಸ್ಟ್ರೈಕ್ ಆಯ್ತು. ಆದರೆ, ಕಾಂಗ್ರೆಸ್ ಪಕ್ಷ ಇದನ್ನು ನಂಬುತ್ತಿಲ್ಲ. ವೀರ ಸೈನಿಕರ ಪರಾಕ್ರಮ, ಭಾರತದ ಶಕ್ತಿ ವಿಶ್ವಕ್ಕೆ ಗೊತ್ತಾಗಿದೆ. ಆದರೆ, ಕಾಂಗ್ರೆಸ್‌ನವರು ಡೋಕ್ಲಾಮ್ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಸುಧಾರಿಸಿಕೊಳ್ಳುತ್ತಿದೆ ಎಂದು ಅಂದುಕೊಂಡಿದ್ದೆ. ಆದರೆ, ಅವರು ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುತ್ತಿಲ್ಲ. ಆದರೆ, ಕಾಂಗ್ರೆಸ್‌ನ ಅಹಂಕಾರ ಅತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‌ಕುಮಾರ್, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಆರ್.ಅಶೋಕ್, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು.

ಪ್ರಧಾನಿಗೆ ಸ್ವಾಗತ
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರಮೋದಿಗೆ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ ಕುಂಟಿಯಾ, ಬಿಬಿಎಂಪಿ ಮೇಯರ್ ಸಂಪತ್‌ರಾಜ್, ಕೇಂದ್ರ ಸಚಿವರು ಸಾಂಪ್ರದಾಯಿಕ ಸ್ವಾಗತ ಕೋರಿ ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News