ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ ಪ್ರಸ್ತಾವ
ಬೆಂಗಳೂರು, ಅ.29: ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲು ಸಂಚಾರ ಪೊಲೀಸರು ಚಿಂತನೆ ನಡೆಸಿದ್ದಾರೆ.
ಕಳೆದ ಅ.14ರಂದು ಕ್ಯಾಬ್‌ವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಇಬ್ಬರು ಸವಾರರು ಸಾವನ್ನಪ್ಪಿದ್ದರು. ಇಂತಹ ಪ್ರಕರಣಗಳು ಆಗಿಂದಾಗೆ ಸಂಭವಿಸುತ್ತಿವೆ. ಹೀಗಾಗಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧದ ಬಗ್ಗೆ ಪ್ರಸ್ತಾವ ಸಿದ್ಧಪಡಿಸುವಂತೆ ಹೆಚ್ಚುವಾರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ತಿಳಿಸಿದ್ದಾರೆ ಎನ್ನಲಾಗಿದೆ.
ಎನ್‌ಎಚ್‌ಎಐ ಆಕ್ಷೇಪ: ಮೇಲ್ಸೇತುವೆ ಮೇಲೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿಷೇಧ ಪ್ರಸ್ತಾವ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿರುವ ಸಂಚಾರಿ ಪೊಲೀಸರ ಕ್ರಮವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೇಲ್ಸೇತುವೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ವಾಹನ ಸಂಚಾರ ನಿಷೇಧ ಮಾಡುವುದರಿಂದ ನಷ್ಟ ಉಂಟಾಗಲಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಸಾಧ್ಯತೆ ಇದೆ.
ನಿಷೇಧದಿಂದ ಸವಾರರಿಗೆ ಸಮಸ್ಯೆ: ಇಲೆಕ್ಟ್ರಾನಿಕ್ ಸಿಟಿ ಬಳಿಯ ಹಲವು ಕಂಪೆನಿಗಳ ಉದ್ಯೋಗಿಗಳು ಬೈಕ್‌ನಲ್ಲಿ ಮೇಲ್ಸೇತುವೆ ಮೂಲಕವೇ ಸಂಚರಿಸಲಿದ್ದಾರೆ. ನಿಷೇಧ ಜಾರಿಗೆ ಬಂದರೆ ಸವಾರರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಮೇಲ್ಸೇತುವೆಯಲ್ಲಿ ವೇಗಮಿತಿಯನ್ನು ಕಡ್ಡಾಯವಾಗಿ ಜಾರಿ ಮಾಡುವ ಮೂಲಕ ಬೈಕ್ ಸವಾರರ ಸಂಚಾರಕ್ಕೆ ಅನವು ಮಾಡಿಕೊಡಬೇಕೆಂದು ಸವಾರರು ಮನವಿ ಮಾಡಿದ್ದಾರೆ.