×
Ad

ಸಾರಿಗೆ ಇಲಾಖೆಯಿಂದ ಸಾರ್ವಜನಿಕರಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಜಾಲತಾಣಗಳಲ್ಲಿ ಎಚ್.ಎಂ.ರೇವಣ್ಣ

Update: 2017-10-29 21:05 IST

ಬೆಂಗಳೂರು, ಅ.29: ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸಧ್ಯ ಫೇಸ್‌ ಬುಕ್ ಮತ್ತು ಟ್ವಿಟ್ಟರ್‌ಗಳ ಮೂಲಕ ನೇರವಾಗಿ ಜನರೊಂದಿಗೆ ಸಂವಹನ ಆರಂಭಿಸಿದ್ದಾರೆ. ಸಾರಿಗೆ ಇಲಾಖೆಯಿಂದ ಸಾರ್ವಜನಿಕರಿಗೆ ಎದುರಾಗುವ ಸಮಸ್ಯೆಗಳಿಗೆ ಜಾಲತಾಣಗಳ ಮೂಲಕ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ವಿದ್ಯಾರ್ಥಿಯೊಬ್ಬ ಬಸ್ ಅತ್ತುವಾಗ ನಿರ್ವಾಹಕ ಮತ್ತು ಚಾಲಕನ ನಿರ್ಲಕ್ಷ್ಯಕ್ಕೆ ಸಾರಿಗೆ ಸಂಸ್ಥೆಯ ಬಸ್ ಚಕ್ರಕ್ಕೆ ಸಿಲುಕಿ ಕಾಲು ಮುರಿದುಕೊಂಡಿದ್ದಾನೆ. ಈ ಘಟನೆಗೆ ಬಸ್‌ನ ಕಂಡಕ್ಟರ್ ಮತ್ತು ಚಾಲಕನ ನಿರ್ಲಕ್ಷ್ಯ ಕಾರಣವೆಂದು ದೂರು ದಾಖಲಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸಾರಿಗೆ ಸಚಿವರು ಸಾಮಾಜಿಕ ಜಾಲತಾಣದ ಮೂಲಕ ಇಲಾಖೆ ಸಿಬ್ಬಂದಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇನ್ನು ಮುಂದೆ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಾರಿಗೆ ನಿಗಮಗಳ ಬಸ್ ಚಾಲಕರು ಮತ್ತು ನಿರ್ವಾಹಕರು ಸೌಜನ್ಯದಿಂದ ವರ್ತಿಸಬೇಕು. ಅನುಚಿತವಾಗಿ ವರ್ತಿಸಿದ ಬಗ್ಗೆ ದೂರುಗಳು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಎಚ್ಚರಿಕೆಯ ಸಂದೇಶ ಹಾಕಿದ್ದಾರೆ.

ರಜನಿಕಾಂತ್ ಸ್ಫೂರ್ತಿ: ಇಂದಿನ ನಿರ್ವಾಹಕರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಸ್ಫೂರ್ತಿಯಾಗಿ ಪರಿಗಣಿಸಬೇಕು. ನಾನು ವಿದ್ಯಾರ್ಥಿ ಜೀವನದಲ್ಲಿ ಬಸ್‌ನಲ್ಲಿ ಪ್ರಯಾಣಿಸಿದ್ದೇನೆ. ಈ ಸಮಯದಲ್ಲಿ ಉತ್ತಮ ನಿರ್ವಾಹಕರನ್ನೂ ನೋಡಿದ್ದೇನೆ. ಹನುಮಂತನಗರ ಮಾರ್ಗದ 10 ಎ ಸಂಖ್ಯೆಯ ಬಸ್‌ನಲ್ಲಿನ ಪ್ರಯಾಣ ನನ್ನ ಬಸ್ ಪ್ರಯಾಣದಲ್ಲಿ ಸ್ಮರಣೀಯ. ಆ ಬಸ್‌ನಲ್ಲಿ ನಟ ರಜನಿಕಾಂತ್ ನಿರ್ವಾಹಕ ಆಗಿದ್ದರು. ಅವರು ಪ್ರಯಾಣಿಕರೊಂದಿಗೆ ವರ್ತಿಸುತ್ತಿದ್ದ ರೀತಿ ನಿಜಕ್ಕೂ ಸ್ನೇಹಪರ ಮತ್ತು ಸೌಜನ್ಯದಿಂದ ಕೂಡಿರುತ್ತಿತ್ತು. ಇವರ ವ್ಯಕ್ತಿತ್ವ, ವೃತ್ತಿಪರತೆ ಎಲ್ಲರಿಗೂ ಸ್ಫೂರ್ತಿ ಆಗಬೇಕು ಎಂದು ಎಂದು ಸಾರಿಗೆ ಸಚಿವ ಸಾರಿಗೆ ಸಿಬ್ಬಂದಿಗೆ ಜಾಲತಾಣದ ಮೂಲಕ ಕಿವಿಮಾತು ಹೇಳಿದ್ದಾರೆ.

ಫೇಸ್ ಬುಕ್ ಹಾಗೂ ವಾಟ್ಸಾಪ್ ಗ್ರೂಪ್‌ನಲ್ಲಿ ತಮ್ಮ ಪ್ರತಿ ನಿತ್ಯದ ಕಾರ್ಯಕ್ರಮ ಕುರಿತು ಫೋಟೊ ಹಾಗೂ ಅನಿಸಿಕೆ ಅಭಿಪ್ರಾಯಗಳನ್ನು ಅಪ್‌ಲೋಡ್ ಮಾಡುವ ಮೂಲಕ ಜಾಲತಾಣದಲ್ಲಿ ಸಚಿವ ಎಚ್.ಎಂ.ರೇವಣ್ಣ ಸಕ್ರಿಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News