‘ಅಹಿಂಸಾ’ ವಿರುದ್ಧ ಮೊಕದ್ದಮೆ: ಜ್ಞಾನ ಪ್ರಕಾಶ್ ಸ್ವಾಮೀಜಿ
ಬೆಂಗಳೂರು, ಅ. 29: ಪರಿಶಿಷ್ಟ ಜಾತಿ ಮತ್ತು ವರ್ಗದ(ಎಸ್ಸಿ-ಎಸ್ಟಿ) ನೌಕರರ ಮುಂಭಡ್ತಿ ವಿಚಾರದಲ್ಲಿ ಆಧುನಿಕ ಅಸ್ಪೃಶ್ಯತೆ ಹುಟ್ಟುಹಾಕಲು ಮುಂದಾಗಿರುವ ‘ಅಹಿಂಸಾ’ ವಿರುದ್ಧ ಮೊಕದ್ದಮೆ ದಾಖಲಿಸಬಹುದು ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಪೀಠಾಧ್ಯಕ್ಷ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ನಗರದ ಗಾಂಧಿಭವನದಲ್ಲಿ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಏರ್ಪಡಿಸಿದ್ದ, ‘ಭಡ್ತಿ ಮೀಸಲಾತಿ ಮತ್ತು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಸಾಮಾಜಿಕ ನ್ಯಾಯ ರಕ್ಷಣೆ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೀಸಲಾತಿಯಿಂದಲೇ ಎಲ್ಲ ಸವಲತ್ತು ದಲಿತರಿಗೆ ದೊರೆತ್ತಿದ್ದು, ಅವರು ಮತ್ತೊಬ್ಬರ ಹಕ್ಕುಗಳನ್ನು ಕಸಿಯುತ್ತಿದ್ದಾರೆ. ಮೀಸಲಾತಿ ಎನ್ನುವುದು ಅಭಿವೃದ್ಧಿಗೆ ವಿರೋಧ ಎಂದೆಲ್ಲಾ ಅಪಪ್ರಚಾರ ಮಾಡಿ ದಲಿತರ ಮೇಲೆ ಆಧುನಿಕ ಅಸ್ಪೃಶ್ಯತೆ ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇನ್ನು ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ (ಅಹಿಂಸಾ) ಎಂದು ಹೇಳಿಕೊಂಡು ಅಸ್ಪೃಶ್ಯತೆಗೆ ಜೀವ ತುಂಬಲಾಗುತ್ತಿದೆ. ಹೀಗಾಗಿ, ಇದರ ವಿರುದ್ಧ ಕಾನೂನು ಹೋರಾಟ ಮಾಡಬಹುದೆಂದು ನುಡಿದರು.
ಮೀಸಲಾತಿ ಎಂದರೆ ಕೇವಲ ದಲಿತರಿಗೆ ಸೀಮಿತವಾಗಿಲ್ಲ. ಎಲ್ಲ ವರ್ಗಗಳೂ ಇಂದು ಮೀಸಲಾತಿಯ ಲಾಭ ಪಡೆಯುತ್ತಿವೆ. ಆದರೆ, ಒಂದು ಸಮುದಾಯವನ್ನೇ ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಸಾಮಾನ್ಯ ವರ್ಗದವರೂ ಹೋರಾಟ ನಡೆಸಲಿ, ಆದರೆ, ಪರೋಕ್ಷವಾಗಿ ಅಸ್ಪೃಶ್ಯತೆಗೆ ಬೆಂಬಲ ನೀಡುವವರನ್ನು ವಿರೋಧಿಸಬೇಕೆಂದು ತಿಳಿಸಿದರು.
ಮನುವಾದಿಗಳು ಅಹಿಂದ ವರ್ಗವನ್ನು ಬೇರ್ಪಡಿಸಲು ಬಹುದೊಡ್ಡ ಸಂಚು ರೂಪಿಸಿದ್ದು, ಇನ್ನು ಮೀಸಲಾತಿ ವಿಷಯದಲ್ಲೂ ಇವರ ವಿರೋಧ ಇದೆ. ಅಲ್ಲದೆ, ಇತ್ತೀಚಿಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮೀಸಲಾತಿ ಸಂಬಂಧ ನೀಡಿರುವ ಹೇಳಿಕೆಯೇ ಇದಕ್ಕೆ ಉದಾಹರಣೆ ಎಂದು ಹೇಳಿದರು.
ದಲಿತರ ನೂರಾರು ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಆದರೆ, ಈ ಬಗ್ಗೆ ಧ್ವನಿಗೂಡಿಸುವ ಒಬ್ಬ ನಾಯಕನೂ ದೇಶದಲ್ಲಿ ಇಲ್ಲ ಎಂದ ಅವರು, ದಲಿತ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಜತೆಗೆ ರಾಜ್ಯ ಸರಕಾರ ಎಸ್ಸಿ-ಎಸ್ಟಿ ನೌಕರರ ಹಿತ ಕಾಪಾಡಲು ಮುಂದಾಗಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಮಾತನಾಡಿ, ಭಡ್ತಿ ಮೀಸಲಾತಿ ಉಳಿಸಿಕೊಂಡರೆ ಮಾತ್ರ ದಲಿತರು ಬದುಕು ಕಟ್ಟಿಕೊಳ್ಳಲು ಸಾಧ್ಯ. ಹೀಗಾಗಿ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹಿತಕಾಯುವ ದೃಷ್ಟಿಯಿಂದ ಭಡ್ತಿ ಮೀಸಲಾತಿ ಮುಂದುವರಿಕೆಗೆ ರಾಜ್ಯ ಸರಕಾರ ಹೊಸ ಕಾಯ್ದೆಯನ್ನು ರೂಪಿಸಿ ಅದನ್ನು ಬೆಳಗಾವಿ ಅಧಿವೇಶದಲ್ಲಿ ಮಂಡಿಸಬೇಕೆಂದು ಒತ್ತಾಯಿಸಿದರು.
ದೇವರಾಜ ಅರಸು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಎನ್.ವಿ. ನರಸಿಂಹಯ್ಯ ಮಾತನಾಡಿ, ಕೆಲವರು ಮೀಸಲಾತಿ ಎಂದರೆ ಚೇಳು ಕಚ್ಚಿದಂತೆ ಆಡುತ್ತಾರೆ. ಅಲ್ಲದೆ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ವಲಯಗಳಲ್ಲೂ ಸಮನ್ವಯತೆ ದೊರೆಯುವರೆಗೂ ಈ ದೇಶದಲ್ಲಿ ಮೀಸಲಾತಿ ಇರಲೇ ಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಹಿಫ್ಜುಲ್ಲಾ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಎಸ್.ಬಿ.ಅಮೀನ, ಹೈಕೋರ್ಟ್ ವಕೀಲ ಎಚ್.ವಿ.ಮಂಜುನಾಥ ದಾಸ್, ಸರಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಡಾ.ಕೃಷ್ಣಪ್ಪ, ದಲಿತ ಹೋರಾಟಗಾರ ಗೋಪಾಲಕೃಷ್ಣ ಅರಳಹಳ್ಳಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಸತ್ಯ ನಾರಾಯಣ, ಕೋಶಾಧ್ಯಕ್ಷ ಡಾ.ಎಸ್.ವಿಜಯ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.