ಸದ್ಯದಲ್ಲಿಯೇ ಸೌದಿ ಮಹಿಳೆಯರಿಗೆ ಪ್ರಮುಖ ಕ್ರೀಡಾಂಗಣಗಳಿಗೂ ಪ್ರವೇಶಾವಕಾಶ

Update: 2017-10-30 07:07 GMT

ರಿಯಾದ್,ಅ.30 : ಸೌದಿ ಅರೇಬಿಯಾ ದೇಶವು ತನ್ನ ಕ್ರೀಡಾಂಗಣಗಳಲ್ಲಿ ಮಹಿಳಾ ಪ್ರೇಕ್ಷಕರ ಮೇಲೆ ಹೇರಲಾಗಿರುವ ನಿಷೇಧಗಳನ್ನು ಸಡಿಲಗೊಳಿಸಲು ಆರಂಭಿಸಿದೆ. 2018ರಿಂದ ಮಹಿಳೆಯರಿಗೆ  ಪ್ರಮುಖ ನಗರಗಳ ಮೂರು ಸ್ಥಳಗಳಿಗೆ ಅನುಮತಿ ನೀಡಲಾಗುವುದು ಎಂದು ದೇಶದ ಜನರಲ್ ಸ್ಪೋರ್ಟ್ ಅಥಾರಿಟಿ ಹೇಳಿದೆ.

ಈ ಹಿಂದೆ ಕೇವಲ ಪುರುಷರಿಗೆ ಮಾತ್ರ ಪ್ರವೇಶವಿದ್ದ ರಿಯಾದ್ ನಗರದ ಕಿಂಗ್ ಫಾಹ್ದ್ ಸ್ಟೇಡಿಯಂ, ಜಿದ್ದಾದ ಕಿಂಗ್ ಅಬ್ದುಲ್ಲಾ ಸ್ಪೋರ್ಟ್ ಸಿಟಿ ಹಾಗೂ ದಮ್ಮಾಮ್ ನಗರದ ಪ್ರಿನ್ಸ್ ಮುಹಮ್ಮದ್ ಬಿನ್ ಫಾಹ್ದ್ ಸ್ಟೇಡಿಯಂಗಳು ಕುಟುಂಬಗಳಿಗೆ ಕೂಡ ಪಂದ್ಯಗಳನ್ನು ವೀಕ್ಷಿಸಲು ಏರ್ಪಾಟು ಮಾಡಲಿವೆ. ಆದರೆ ಸದ್ಯ ಮಹಿಳೆಯರಿಗೆ ಅನುಮತಿಯಿರುವ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಸೀನ ವ್ಯವಸ್ಥೆಯಿರುವಂತೆಯೇ ಕ್ರೀಡಾಂಗಣಗಳಲ್ಲೂ ಮಾಡಲಾಗುವುದೇ ಎಂಬುದು ತಿಳಿದು ಬಂದಿಲ್ಲ.

ದೇಶದಲ್ಲಿ ಹಲವಾರು ಕ್ರೀಡಾಂಗಣಗಳಿದ್ದರೂ ಪ್ರಥಮ ಹಂತದಲ್ಲಿ ಕೇವಲ ಮೂರು ಪ್ರಮುಖ ಮತ್ತು ಅತಿ ದೊಡ್ಡ ಕ್ರೀಡಾಂಗಣಗಳಿಗೆ ಮಾತ್ರ ಮಹಿಳೆಯರಿಗೆ ಅನುಮತಿ ದೊರೆಯಲಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಸೌದಿ ಮಹಿಳೆಯರಿಗೂ ವಾಹನ ಚಾಲನೆಗೆ ಅನುಮತಿ ನೀಡಲು ನಿರ್ಧರಿಸಲಾಗಿದ್ದರೆ, ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವ ಎರಡನೇ ಕ್ರಮವಾಗಿ ಅವರಿಗೆ ಕ್ರೀಡಾಂಗಣಗಳಿಗೂ ಅನುಮತಿ ನೀಡಲಾಗುತ್ತಿದೆ.

ಪ್ರಪ್ರಥಮ ಬಾರಿಗೆ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಸೌದಿ ಅರೇಬಿಯಾದ 87ನೇ ಸ್ಥಾಪಕ ದಿನಾಚರಣೆ ರಿಯಾದ್ ನ ಕಿಂಗ್ ಫಾಹ್ದ್  ಸ್ಟೇಡಿಯಂನಲ್ಲಿ ನಡೆದಾಗ ಮಹಿಳೆಯರಿಗೂ ಅನುಮತಿ ನೀಡಲಾಗಿತ್ತಲ್ಲದೆ ಕುಟುಂಬಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತು. ಈ ಕ್ರಮವನ್ನು ಹಲವರು ಸ್ವಾಗತಿಸಿದ್ದರೂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News