ಎನ್‌ಪಿಎಸ್‌ನಲ್ಲಿ ಹೂಡಿಕೆ ಜೀವಮಾನವಿಡೀ ನಿಮ್ಮ ಹಣವನ್ನು ಜೈಲಿನಲ್ಲಿಟ್ಟಂತೆ....ಏಕೆ ಗೊತ್ತೇ?

Update: 2017-10-30 11:25 GMT

 ಈ ಲೇಖನದ ಶೀರ್ಷಿಕೆ ನಿಮಗೆ ಅಚ್ಚರಿ ಮೂಡಿಸಬಹುದು. ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್) ಹೇಗೆ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಬಲೆಗೆ ಸಿಕ್ಕಿಸುತ್ತದೆ ಎನ್ನುವ ಬಗ್ಗೆ ಇಲ್ಲೊಂದು ವಿಶ್ಲೇಷಣೆಯಿದೆ. ಎನ್‌ಪಿಎಸ್‌ನ ತೆರಿಗೆ ಉಳಿತಾಯ ಗಾಳಕ್ಕೆ ಸಿಲುಕಿ ಬಹಳಷ್ಟು ಹೂಡಿಕೆದಾರರು ವಯೋಮಾನ ಮತ್ತು ಆದಾಯದ ಭೇದವಿಲ್ಲದೆ ಈ ಯೋಜನೆಯಲ್ಲಿ ಹಣವನ್ನು ತೊಡಗಿಸುತ್ತಿದ್ದಾರೆ. ಈ ತೆರಿಗೆ ಉಳಿತಾಯದ ಕೊಡುಗೆ ಎಷ್ಟೊಂದು ಆಕರ್ಷಕವಾಗಿದೆಯೆಂದರೆ ಹೂಡಿಕೆದಾರರು ಯೋಜನೆಯ ಇತರೆಲ್ಲ ಮಗ್ಗಲುಗಳನ್ನು ಕಡೆಗಣಿಸುತ್ತಿದ್ದಾರೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿಸಿಡಿ(1ಬಿ) ಅಡಿ ನೀಡಲಾಗಿರುವ ಹೆಚ್ಚುವರಿ 50,000 ರೂ.ಗಳ ಕಡಿತದ ಕೊಡುಗೆಯು ಹೆಚ್ಚಿನ ಹೂಡಿಕೆದಾರರನ್ನು ಎನ್‌ಪಿಎಸ್‌ನತ್ತ ಸೆಳೆಯುತ್ತಿದೆ. ಈ ಯೋಜನೆಯಲ್ಲಿ ಒಮ್ಮೆ ಹಣ ಹೂಡಿದ ಬಳಿಕ 60 ವರ್ಷಗಳಾಗುವವರೆಗೂ ವಾಪಸ್ ಪಡೆಯುವಂತಿಲ್ಲ ಎನ್ನುವುದನ್ನು ಹೆಚ್ಚಿನವರು ಅರ್ಥ ಮಾಡಿಕೊಂಡಿಲ್ಲ. ತುರ್ತು ಹಿಂದೆಗೆತಕ್ಕೆ ಈ ಯೋಜನೆಯಲ್ಲಿ ಅವಕಾಶವಿದೆಯಾದರೂ ಅದು ವಿಶೇಷ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿದೆ. ಎನ್‌ಪಿಎದ ಈ ನಿಬಂಧನೆ ಸರಕಾರಿ ನೌಕರರಿಗೆ ಮತ್ತು ತಮ್ಮ 60 ವರ್ಷ ಪ್ರಾಯದವರೆಗೂ ದುಡಿಯಲು ಬಯಸುವವರಿಗೆ ಅಷ್ಟು ಬಾಧಕವಲ್ಲದಿರಬಹುದು. ಇದೇ ವೇಳೆ ವ್ಯಕ್ತಿಯೋರ್ವ ಎರಡು ತಿಂಗಳಿಗೂ ಅಧಿಕ ಅವಧಿಗೆ ನಿರುದ್ಯೋಗಿಯಾಗಿದ್ದರೆ ಆತ ನೌಕರರ ಭವಿಷ್ಯನಿಧಿಯಲ್ಲಿನ ತನ್ನ ಹಣವನ್ನು ಸಂಪೂರ್ಣವಾಗಿ ವಾಪಸ್ ಪಡೆಯಬಹುದಾಗಿದೆ.

 ಎನ್‌ಪಿಎಸ್‌ನಲ್ಲಿ ಸುದೀರ್ಘ ಲಾಕ್-ಇನ್ ಅವಧಿಯ ಜೊತೆಗೆ ನಿಮ್ಮ ವಂತಿಗೆ ಪಾವತಿಯು ಕಡ್ಡಾಯವಾಗಿದೆ. ಎನ್‌ಪಿಎಸ್ ಖಾತೆಯನ್ನು ಆರಂಭಿಸಿದಿರೆಂದರೆ ಪ್ರತಿ ವರ್ಷ ಕನಿಷ್ಠ ಮೊತ್ತವನ್ನು ತುಂಬಲೇಬೇಕು. ಹೂಡಿಕೆದಾರರು ತಮ್ಮ ನಿವೃತ್ತಿ ಜೀವನಕ್ಕಾಗಿ ಹಣವನ್ನು ಎನ್‌ಪಿಎಸ್‌ನಲ್ಲಿ ತುಂಬುತ್ತಿದ್ದೇವೆ ಮತ್ತು ಅದರ ಮೇಲೆ ಶೇ.20ರಿಂದ ಶೇ.30ರಷ್ಟು ತೆರಿಗೆಯನ್ನು ಉಳಿಸುತ್ತಿದ್ದೇವೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ನೆನಪಿಡಿ, ಎನ್‌ಪಿಎಸ್ ನಿಮ್ಮ ತೆರಿಗೆಯನ್ನು ಮುಂದೂಡುತ್ತದೆ ಅಷ್ಟೇ...ಹಣವನ್ನು ಹಿಂದೆಗೆದುಕೊಳ್ಳುವಾಗ ನೀವು ತೆರಿಗೆಯನ್ನು ಪಾವತಿಸಲೇಬೇಕು.

ವಾಸ್ತವದಲ್ಲಿ ತೆರಿಗೆ ಪದ್ಧತಿಯು ಎನ್‌ಪಿಎಸ್‌ನಲ್ಲಿ ಪ್ರಮುಖ ನಕಾರಾತ್ಮಕ ಅಂಶವಾಗಿದೆ. ಹಣವನ್ನು ಹಿಂದೆಗೆದುಕೊಳ್ಳುವಾಗ ಸಂಚಿತ ನಿಧಿಯ ಶೇ.40ರಷ್ಟನ್ನು ಮಾತ್ರ ತೆರಿಗೆ ಮುಕ್ತವಾಗಿ ಪಡೆಯಬಹುದು. ಇನ್ನೊಂದು ಶೇ.20ರಷ್ಟನ್ನು ವಾಪಸ್ ಪಡೆಯುವಾಗ ಹೂಡಿಕೆದಾರನಿಗೆ ಅನ್ವಯವಾಗುವ ದರದಲ್ಲಿ ತೆರಿಗೆ ಕಡಿತವಾಗುತ್ತದೆ. ಉಳಿದ ಶೇ.40 ರಷ್ಟು ಮೊತ್ತವನ್ನು ಮಾಸಿಕ ಪಿಂಚಣಿಯನ್ನು ಪಡೆಯಲು ಎನ್ಯುಯಿಟಿಯಲ್ಲಿ ಕಡ್ಡಾಯವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಹೂಡಿಕೆದಾರರು ಮೋಸ ಹೋಗುವುದು ಇಲ್ಲಿಯೇ. ಏಕೆಂದರೆ ಈ ಎನ್ಯುಯಿಟಿಯು ಸಂಪೂರ್ಣವಾಗಿ ತೆರಿಗೆಗೆ ಅರ್ಹವಾಗಿದೆ ಮತ್ತು ದೀರ್ಘಾವಧಿ ಬಂಡವಾಳ ಗಳಿಕೆಯ ಮೇಲೆ ಯಾವುದೇ ಲಾಭವು ದೊರೆಯುವುದಿಲ್ಲ.

ಇದು ಒಂದು ರೀತಿಯಲ್ಲಿ ನಿಮ್ಮ ಶೇ.60ರಷ್ಟು ಹಣ ಜಾಮೀನು ಪಡೆದು ಹೊರಗೆ ಬಂದಂತೆ ಮತ್ತು ಉಳಿದ ಶೇ.40ರಷ್ಟು ಹಣ ಜೈಲಿನಲ್ಲಿ ಇದ್ದಂತೆ ಆಗುತ್ತದೆ.

 ಎನ್ಯುಯಿಟಿಗಳು ಹೂಡಿಕೆದಾರ ಸಮುದಾಯದಲ್ಲಿ ವಿಶ್ವಾಸವನ್ನು ಮೂಡಿಸುವುದಿಲ್ಲ ಏಕೆ ಎನ್ನುವುದಕ್ಕೆ ಇತರ ಕಾರಣಗಳೂ ಇವೆ. ಖರೀದಿದಾರ ಹಣದುಬ್ಬರ ದರ ಏನಾಗುತ್ತದೆ ಎನ್ನುವುದನ್ನು ಪರಿಗಣಿಸದೆ ಸ್ಥಿರ ಬಡ್ಡಿದರದಲ್ಲಿ ಉತ್ಪನ್ನವೊಂದಕ್ಕೆ ಸಹಿ ಮಾಡುತ್ತಾನೆ. ತನ್ನ ಇನ್ವೆಸ್ಟ್‌ಮೆಂಟ್ ಪೋರ್ಟ್‌ಫೋಲಿಯೋದ ಮೇಲೆ ಆತನಿಗೆ ಯಾವುದೇ ನಿಯಂತ್ರಣವಿರುವುದಿಲ್ಲ. ಎನ್‌ಪಿಎಸ್ ಹೂಡಿಕೆದಾರ ತನ್ನ ಸಂಚಿತ ನಿಧಿಯ ಶೇ.40 ರಷ್ಟು ಮೊತ್ತವನ್ನು ಎನ್ಯುಯಿಟಿ ಎಂಬ ಕಪ್ಪುರಂಧ್ರದಲ್ಲಿ ತೊಡಗಿಸುವುದನ್ನು ಅನಿವಾರ್ಯವಾಗಿಸುತ್ತದೆ.

ಎನ್‌ಪಿಎಸ್ ಶೇರು ಮಾರುಕಟ್ಟೆಯೊಂದಿಗೆ ತಳುಕು ಹಾಕಿಕೊಂಡಿರುವುದರಿಂದ ಅದು ಖಚಿತ ಪ್ರತಿಫಲವನ್ನು ನೀಡುವುದಿಲ್ಲ. ನೀವು ತೆರಿಗೆಯನ್ನೂ ಪಾವತಿಸಬೇಕು ಮತ್ತು ಮಾರುಕಟ್ಟೆಯೊಂದಿಗೆ ತಳುಕು ಹಾಕಿಕೊಂಡಿರುವ ಪ್ರತಿಫಲದ ಅಪಾಯವನ್ನೂ ಎದುರಿಸಬೇಕು ಎಂದಾದರೆ ಅದನ್ನು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಇನ್ನಷ್ಟು ಹೆಚ್ಚು ನಮ್ಯತೆ ಮತ್ತು ಆಯ್ಕೆಯೊಂದಿಗೆ ನೀವೇ ಮಾಡಬಹುದಲ್ಲವೇ?

Writer - ವಿಪಿನ್ ಖಂಡೇಲವಾಲ್

contributor

Editor - ವಿಪಿನ್ ಖಂಡೇಲವಾಲ್

contributor

Similar News