ಹಿರಿಯ ನನ್ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ಅಂತ್ಯ: ನ.7ಕ್ಕೆ ತೀರ್ಪು

Update: 2017-10-30 14:08 GMT

ಕೋಲ್ಕತಾ,ಅ.30: 2015ರಲ್ಲಿ ನಾಡಿಯಾ ಜಿಲ್ಲೆಯ ರಾಣಾಘಾಟ್‌ನಲ್ಲಿ 72ರ ಹರೆಯದ ನನ್ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರು ಆರೋಪಿಗಳ ವಿಚಾರಣೆಯು ಇಲ್ಲಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸೋಮವಾರ ಪೂರ್ಣಗೊಂಡಿದ್ದು, ನ.7ಕ್ಕೆ ತೀರ್ಪು ಹೊರಬೀಳಲಿದೆ.

2015,ಮಾ.14ರಂದು ರಾಣಾಘಾಟ್‌ನ ಕಾನ್ವೆಂಟ್‌ಗೆ ನುಗ್ಗಿದ್ದ ಶಂಕಿತ ಬಾಂಗ್ಲಾದೇಶಿ ಆರೋಪಿಗಳ ಗುಂಪು ನನ್ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕಪಾಟಿನಲ್ಲಿದ್ದ ನಗದು ಹಣದೊಂದಿಗೆ ಪರಾರಿಯಾಗಿತ್ತು.

ಪ್ರಕರಣದಲ್ಲಿಯ ಆರು ಆರೋಪಿಗಳನ್ನು ರಾಜ್ಯ ಸಿಐಡಿ ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಘಟನೆಯ ಬಳಿಕ ದಿಲ್ಲಿಗೆ ಸ್ಥಳಾಂತರಗೊಂಡಿದ್ದ ನನ್ ಆರೋಪಿಗಳು ರಾಣಾಘಾಟ್‌ನಲ್ಲಿ ಬಲವಾದ ಸಂಪರ್ಕಗಳನ್ನು ಹೊಂದಿರುವುದರಿಂದ ತನ್ನ ಸುರಕ್ಷತೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದರಿಂದ ಕಲಕತ್ತಾ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ವಿಚಾರಣೆಯನ್ನು ಕಳೆದ ವರ್ಷದ ಮೇ ತಿಂಗಳಲ್ಲಿ ಕೋಲ್ಕತಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.

 ಮಿಲನ್ ಕುಮಾರ ಸರ್ಕಾರ್, ವಹೀದುಲ್ ಇಸ್ಲಾಂ, ಮುಹಮ್ಮದ್ ಸಲೀಂ ಶೇಖ್, ನಝ್ರುಲ್ ಇಸ್ಲಾಂ, ಖಾಲೆದಾರ್ ರೆಹ್ಮಾನ್ ಮತ್ತು ಗೋಪಾಲ ಸರ್ಕಾರ್ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News