ಅಯೋಧ್ಯೆ ವಿವಾದ: ರವಿಶಂಕರ್ ಗುರೂಜಿ ಮಧ್ಯಸ್ಥಿಕೆಗೆ ವಿರೋಧ

Update: 2017-10-30 15:56 GMT

ಸಂಭಲ್(ಉ.ಪ್ರ),ಅ.30: ಅಯೋಧ್ಯೆ ವಿವಾದವನ್ನು ಬಗೆಹರಿಸಲು ಆರ್ಟ್ ಆಫ್ ಲಿವಿಂಗ್‌ನ ಸ್ಥಾಪಕ ಶ್ರೀ ಶ್ರೀ ರವಿಶಂಕರ ಅವರ ಉಪಕ್ರಮಕ್ಕೆ ತಡೆಯುಂಟಾಗಿದೆ. ಮಾಜಿ ಬಿಜೆಪಿ ಸಂಸದ ರಾಮ ವಿಲಾಸ್ ವೇದಾಂತಿ ಅವರು ರವಿಶಂಕರ್ ಕೊಡುಗೆ ಯನ್ನು ತಿರಸ್ಕರಿಸಿದ್ದರೆ, ನ್ಯಾಯಾಲಯದ ಹೊರಗೆ ಪ್ರಕರಣದ ಇತ್ಯರ್ಥವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಮತ್ತು ಬಾಬ್ರಿ ಕ್ರಿಯಾ ಸಮಿತಿ ವಿರೋಧಿಸಿವೆ.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇದಾಂತಿ, ರಾಮ ಮಂದಿರ ಆಂದೋಲನದೊಂದಿಗೆ ಎಂದೂ ಗುರುತಿಸಿಕೊಂಡಿರದ, ರಾಮ ಲಲ್ಲಾನ ದರ್ಶನವನ್ನು ಎಂದಿಗೂ ಪಡೆದಿರದ ವ್ಯಕ್ತಿ ಮಂದಿರ ನಿರ್ಮಾಣದ ವಿಷಯದಲ್ಲಿ ಮಧ್ಯಸ್ಥಿಕೆ ನಡೆಸಲು ಹೇಗೆ ಸಾಧ್ಯ? ನಾವು ಅದಕ್ಕಾಗಿ ಜೈಲಿಗೆ ಹೋಗಿದ್ದೇವೆ, ಗೃಹಬಂಧನ ಅನುಭವಿಸಿದ್ದೇವೆ ಮತ್ತು ನ್ಯಾಯಾಲಯದಲ್ಲಿ ಹೋರಾಡುತ್ತಿದ್ದೇವೆ. ಈ ವಿಷಯದಲ್ಲಿ ಮಧ್ಯಸ್ಥಿಕೆ ನಡೆಸಲು ಶ್ರೀ ಶ್ರೀ ಅವರಿಗೆ ಯಾವುದೇ ಅರ್ಹತೆಯಿಲ್ಲ ಎಂದು ಹೇಳಿದರು.

ಮುಸ್ಲಿಂ ಧಾರ್ಮಿಕ ನಾಯಕರು ಮುಂದೆ ಬರಬೇಕೆಂದು ನಾವು ಬಯಸಿದ್ದೇವೆ. ನಾವು ಒಂದಾಗಿ ಕುಳಿತು ವಿಷಯವನ್ನು ಚರ್ಚಿಸುತ್ತೇವೆ. ಈ ವಿವಾದಕ್ಕೆ ಹಿಂದುಗಳು ಮತ್ತು ಮುಸ್ಲಿಮರು ಒಂದಾಗಿ ಪರಿಹಾರವನ್ನು ಕಂಡುಕೊಳ್ಳಬೇಕು ಮತ್ತು ಪರಸ್ಪರ ಒಪ್ಪಿಗೆಯ ಆಧಾರದಲ್ಲಿ ಮಂದಿರ ನಿರ್ಮಾಣಗೊಳ್ಳಬೇಕು ಎಂದು ನಾವು ಬಯಸಿದ್ದೇವೆ ಎಂದರು.

 ರಾಮ ಮಂದಿರ ವಿವಾದವನ್ನು ನ್ಯಾಯಾಲಯದ ಹೊರಗೆ ರಾಜಿಯಲ್ಲಿ ಇತ್ಯರ್ಥ ಗೊಳಿಸಲು ರವಿಶಂಕರ್ ಅವರು ನಿರ್ಮೋಹಿ ಅಖಾಡಾದ ಆಚಾರ್ಯ ರಾಮದಾಸ ಸೇರಿದಂತೆ ಹಲವಾರು ಸ್ವಾಮಿಗಳು ಮತ್ತು ಇಮಾಮ್‌ಗಳ ಸಂಪರ್ಕದಲ್ಲಿದ್ದಾರೆ ಎಂದು ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನವು ಕಳೆದ ವಾರ ಹೇಳಿತ್ತು.

ರಾಜಿ ಪಂಚಾಯಿತಿಯನ್ನು ತಾನು ಒಪ್ಪುವುದಿಲ್ಲ ಮತ್ತು ವಿವಾದವು ನ್ಯಾಯಾಲಯದ ಮೂಲಕವೇ ಬಗೆಹರಿಯಬೇಕು ಎಂದು ಎಐಎಂಪಿಎಲ್‌ಬಿಯೂ ಹೇಳಿದೆ.

ಅಯೋಧ್ಯೆ ವಿವಾದದ ರಾಜಿ ಇತ್ಯರ್ಥಕ್ಕಾಗಿ ತಮ್ಮ ಯಾವುದೇ ಅಧಿಕೃತ ಪ್ರತಿನಿಧಿಗಳು ರವಿಶಂಕರ್ ಅವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ ಎಐಎಂಪಿಎಲ್‌ಬಿ ಸದಸ್ಯ ಹಾಗೂ ಬಾಬ್ರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕ ಝಫ್ರಯಾಬ್ ಜಿಲಾನಿ ಅವರು, ರಾಜಿ ಮೂಲಕ ಅಯೋಧ್ಯೆ ವಿವಾದದ ಪರಿಹಾರ ಸಾಧ್ಯವಿಲ್ಲ. 1992, ಡಿ.6ರಂದು ನೆಲಸಮಗೊಂಡ ಬಾಬ್ರಿ ಮಸೀದಿಯಿದ್ದ ಸ್ಥಳದ ಮೇಲಿನ ಹಕ್ಕನ್ನು ನಾವೆಂದಿಗೂ ಬಿಟ್ಟುಕೊಡುವುದಿಲ್ಲ ಎಂದರು.

ರವಿಶಂಕರ ಅವರು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಬಯಸಿದ್ದರೆ ಅವರು ಎಐಎಂಪಿಎಲ್‌ಬಿಗೆ ವಿಧ್ಯುಕ್ತ ಪ್ರಸ್ತಾವವನ್ನು ಕಳುಹಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News