×
Ad

ಟಿಕೆಟ್‌ಗಾಗಿ ಸಿಂಧ್ಯಾ ನಮ್ಮ ಬಳಿ ಬಂದಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ

Update: 2017-10-30 22:01 IST

ಬೆಂಗಳೂರು, ಅ. 30: ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಅವರು ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ನಮ್ಮ ಬಳಿ ಬಂದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಜೆಪಿ ಭವನದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿಂಧ್ಯಾ ಈಗಾಗಲೇ ಪಕ್ಷದಲ್ಲಿ ಇರುವುದರಿಂದ ಅವರು ಜೆಡಿಎಸ್ ಸೇರ್ಪಡೆಯಾಗುತ್ತಿಲ್ಲ. ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದರು. ಇಂದಿನಿಂದ ಪಕ್ಷ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಕಾರ್ಮಿಕರಿಗೆ ಗೌರವ: ಆರು ತಿಂಗಳ ಹಿಂದೆಯೇ ಹೊಸ ಕಚೇರಿಯ ಪ್ರವೇಶ, ವಿಶೇಷ ಪೂಜೆ ನಡೆದಿತ್ತು. ಆಗ ಇನ್ನೂ ಕಟ್ಟಡದ ಕೆಲಸ ಬಾಕಿ ಇತ್ತು. ಇದೀಗ ಕಟ್ಟಡ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಡೆದ ಪೂಜಾ ಕಾರ್ಯಕ್ರಮ ನಡೆಸಿದ್ದು, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಗೌರವಿಸಲು ಸಮಾರಂಭ ಮಾಡಲಾಗುತ್ತಿದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಅಪೇಕ್ಷೆ. ಆ ನಿಟ್ಟಿನಲ್ಲಿ ಸಿಂಧ್ಯಾ, ಕುಮಾರಸ್ವಾಮಿ, ಬಸವರಾಜ ಹೊರಟ್ಟಿ, ರೇವಣ್ಣ ಸೇರಿದಂತೆ ಹಲವು ಮುಖಂಡರಿದ್ದಾರೆ ಎಂದ ಅವರು, 2018ರ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸಲಿದ್ದಾರೆ ಎಂದರು.

ಪಿಜಿಆರ್ ಸಿಂಧ್ಯಾ ಮತ್ತು ನನ್ನ ಸ್ನೇಹ 1975ರಲ್ಲಿ ಆರಂಭವಾದದ್ದು. ಆವತ್ತು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಪ್ರಧಾನಿ ಇಂದಿರಾಗಾಂಧಿ ನಮ್ಮನ್ನ ಜೈಲಿಗೆ ಹಾಕಿದ್ದರು ಎಂದು ನೆನಪಿಸಿಕೊಂಡ ಅವರು, ಕೆಲ ದಿನಗಳ ಹಿಂದೆ ಸಿಂಧ್ಯಾ ಅವರಿಗೆ ಪಕ್ಷದಲ್ಲಿ ಸಕ್ರಿಯರಾಗಲು ಮನವಿ ಮಾಡಿದ್ದೆ. ಇಂದು ಕಾಲ ಕೂಡಿ ಬಂದಿದೆ ಎಂದರು.

ಜೆ.ಪಿ.ಭವನದ ಕಟ್ಟಡದಲ್ಲಿ ಎಲ್ಲ ವಿಭಾಗಗಳಿಗೂ ಕೊಠಡಿ ಮೀಸಲಿಡಲಾಗಿದೆ. ಕಚೇರಿಯಲ್ಲಿ ಶಿಸ್ತು ಬದ್ಧವಾಗಿ ಕೆಲಸ ನಡೆಯಬೇಕು ಎಂದ ದೇವೇಗೌಡ, ಮುಂದಿನ ಚುನಾವಣೆ ಬಳಿಕ ಸಿಂಧ್ಯಾ ಮತ್ತು ತಾನು ರಾಷ್ಟ್ರಮಟ್ಟದ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News