×
Ad

2 ಸಾವಿರ ಸರಕಾರಿ ಶಾಲೆ ಮೇಲ್ದರ್ಜೆಗೆ: ತನ್ವೀರ್ ಸೇಠ್

Update: 2017-10-30 22:06 IST

ಬೆಂಗಳೂರು, ಅ.30: ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಎರಡು ಸಾವಿರ ಸರಕಾರಿ ಶಾಲೆಗಳನ್ನು ಕಿರಿಯ ಪ್ರಾಥಮಿಕದಿಂದ ಹಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕದಿಂದ ಪ್ರೌಢಶಾಲೆ ಹಾಗೂ ಪ್ರೌಢಶಾಲೆಯಿಂದ ದ್ವಿತೀಯ ಪಿಯು ಕಾಲೇಜ್ ಆಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.

ಸೋಮವಾರ ಮಗು ಮತ್ತು ಕಾನೂನು ಕೇಂದ್ರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ನಗರದ ಶಿಕ್ಷಕರ ಸದನದಲ್ಲಿ ‘ಸರಕಾರಿ ಶಾಲೆಗಳು ಉಳಿಯಲಿ-ಬೆಳೆಯಲಿ-ನೆರೆಹೊರೆಯ ಸಮಾನ ಶಾಲೆಗಳಾಗಲಿ’ ಎಂಬ ಆಶಯದೊಂದಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಸಮುದಾಯ ಶೈಕ್ಷಣಿಕ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನದಲ್ಲಿ ಹೊಸ ಸರಕಾರಿ ಶಾಲೆಗಳನ್ನು ತೆರೆಯವುದಕ್ಕೆ ಸಾಧ್ಯವಿಲ್ಲ. ಇರುವ ಶಾಲೆಗಳನ್ನು ಉಳಿಸಿಕೊಂಡು, ಆ ಶಾಲೆಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಬರುವಂತೆ ನೋಡಿಕೊಳ್ಳುವುದು ದೊಡ್ಡ ಸವಾಲಿನ ಸಂಗತಿಯಾಗಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಎರಡು ಸಾವಿರ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.

ಶಿಕ್ಷಣ ನಿಧಿ: ಸರಕಾರಿ ಶಾಲೆಗಳನ್ನು ಅತ್ಯಾಧುನಿಕವಾಗಿ ನಿರ್ಮಿಸುವ ಉದ್ದೇಶದಿಂದ ಶಿಕ್ಷಣ ನಿಧಿಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಕಾರ್ಪೊರೇಟ್ ಕಂಪೆನಿಗಳಿಗೆ ಸರಕಾರಿ ಶಾಲೆಗಳನ್ನು ದತ್ತು ಪಡೆಯಲು ಮುಕ್ತ ಅವಕಾಶಗಳನ್ನು ಒದಗಿಸಿಕೊಡಲಾಗುವುದು. ಒಟ್ಟು ಸರಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಜತೆಗೆ ಸಮನ್ವಯ: ಸರಕಾರಿ ಶಾಲೆಗಳ ಅಭಿವೃದ್ಧಿ ಪೋಷಕರ ಪಾಲು ದೊಡ್ಡದಿದೆ. ಹೀಗಾಗಿ ವಿದ್ಯಾರ್ಥಿಗಳ ಪೋಷಕರನ್ನೇ ಎಸ್‌ಡಿಎಂಸಿಗೆ ಅಧ್ಯಕ್ಷರಾಗಿ, ಸದಸ್ಯರನ್ನಾಗಿ ನೇಮಿಸಲಾಗಿದೆ. ಹಾಗೂ ಎಸ್‌ಡಿಎಂಸಿಗಳಿಗೆ ವಿದ್ಯಾರ್ಥಿಗಳ ಸಮವಸ್ತ್ರ, ಶೂಗಳನ್ನು ಕೊಳ್ಳುವ ಅಧಿಕಾರವನ್ನು ನೀಡಲಾಗಿದೆ ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದರು.

ಕೆಲವು ಶಾಲೆಗಳಲ್ಲಿ ಎಸ್‌ಡಿಎಂಸಿ ಸಮಿತಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರ ನಡುವೆ ಸಮನ್ವಯದ ಕೊರತೆ ಉಂಟಾಗಿ ಶಾಲೆಯ ಅಭಿವೃದ್ಧಿಗೆ ಮಾರಕವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಶಾಲೆಯ ಅಭಿವೃದ್ಧಿಯತ್ತ ಗಮನ ಕೊಡಬೇಕು ಎಂದು ಹೇಳಿದರು.

ಡಿಡಿಪಿಐಗೆ ಹೆಚ್ಚಿನ ಅಧಿಕಾರ: ಡಿಡಿಪಿಐಗಳ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆ ಒಳಗೊಂಡಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಶಾಲೆಗಳನ್ನು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳುವ ಅಧಿಕಾರವನ್ನು ನೀಡಲಾಗಿದೆ. ಡಿಡಿಪಿಐಗಳ ಕಣ್ಣು ತಪ್ಪಿಸಿ ಖಾಸಗಿ ಶಿಕ್ಷಣ ಶಾಲೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಗತ್ಯವಿಲ್ಲ ಎಂದರು.

ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, ಭಾರತದ ಮೂಲ ಬೇರುಗಳಾದ ಬಹುತ್ವ, ಬಹುಸಂಸ್ಕೃತಿ, ಜಾತ್ಯತೀತ ಮನೋಭಾವ, ಭಾಷಾ ಸೌಹಾರ್ದತೆ ಉಳಿಯಬೇಕಾದರೆ ಸರಕಾರಿ ಶಾಲೆಗಳಿಂದ ಮಾತ್ರ ಸಾಧ್ಯ. ಹೀಗಾಗಿ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ, ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ಎಸ್.ರಾಜೇಂದ್ರ ಬಾಬು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ನ್ಯಾಷನಲ್ ಲಾ ಸ್ಕೂಲ್‌ನ ಕುಲಪತಿ ಪ್ರೊ.ಆರ್.ವೆಂಕಟರಾವ್, ರಾಷ್ಟ್ರೀಯ ಶಿಕ್ಷಣ ಹಕ್ಕು ವೇದಿಕೆಯ ಸಂಚಾಲಕ ಅಂಬರೀಶ್ ರೈ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News