×
Ad

ಬೆಳಗಾವಿ ಅಧಿವೇಶನದಲ್ಲಿ ವಿದ್ಯುತ್ ಖರೀದಿ ಅವ್ಯವಹಾರ ವರದಿ ಮಂಡನೆ: ಡಿ.ಕೆ.ಶಿವಕುಮಾರ್

Update: 2017-10-30 22:12 IST

ಬೆಂಗಳೂರು, ಅ.30: ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ವಿದ್ಯುತ್ ಖರೀದಿ ಅಕ್ರಮಕ್ಕೆ ಸಂಬಂಧಿಸಿದ ಸದನ ಸಮಿತಿಯ ವರದಿಯನ್ನು ನ.13ರಿಂದ ಬೆಳಗಾವಿಯಲ್ಲಿ ಆರಂಭಗೊಳ್ಳಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಇಂಧನ ಸಚಿವ ಹಾಗೂ ಸದನ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಸದನ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.7ರಂದು ಸದನ ಸಮಿತಿಯ ವರದಿಗೆ ಸಹಿ ಹಾಕುವಂತೆ ಎಲ್ಲ ಸದಸ್ಯರಿಗೆ ಆಹ್ವಾನ ನೀಡಲಾಗಿದೆ. ಆ ಸಭೆಯಲ್ಲಿ ಪಾಲ್ಗೊಂಡು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದೆ ಎಂದರು.

ಸದಸ್ಯರ ಅಭಿಪ್ರಾಯಗಳನ್ನು ಕ್ರೋಡೀಕರಿಸಿದ್ದೇವೆ. ಸದಸ್ಯರು ನೀಡುವ ಅಭಿಪ್ರಾಯಕ್ಕೆ ನಮ್ಮ ತಕರಾರಿಲ್ಲ. ನಾವು ನಮ್ಮ ಅಭಿಪ್ರಾಯಕ್ಕೆ ಬಂದಿದ್ದೇವೆ. ಈ ವರದಿಯ ಮೂಲಕ ಯಾರ ಬಾಯಿಯನ್ನು ಮುಚ್ಚಿಸುವುದಿಲ್ಲ. ಯಾರನ್ನು ಹೆಣಿಯುವುದೂ ಇಲ್ಲ. ನಮಗೆ ಕೊಟ್ಟ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ ಎಂದು ಹೇಳಿದರು.

ಈ ವರದಿಯಲ್ಲಿ ಬೇರೆಯವರ ಮೇಲೆ ಕೇವಲ ಆರೋಪಗಳನ್ನು ಮಾತ್ರ ಮಾಡಲಾಗಿಲ್ಲ. ಇಲಾಖೆಯ ಮುಂದಿನ ದಿನಗಳಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬ ಮಾರ್ಗದರ್ಶನವನ್ನು ಸೇರಿಸಲಾಗಿದೆ ಎಂದು ಅವರು, ನನ್ನ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಅದು ನನಗೆ ಚೆನ್ನಾಗಿ ಗೊತ್ತಿದೆ. ಅವರು ಬಾಯಿ ತೆಗೆದುಕೊಂಡಿದ್ದರೆ ನಮಗೆ ಅನುಕೂಲ. ನಾವು ಯಾಕೆ ಅವರ ಬಾಯಿ ಮುಚ್ಚಿಸೋಣ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಮುಖಂಡರ ವಿರುದ್ಧ ಕಿಡಿಗಾರಿದರು.

ವಿದ್ಯುತ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ನಾನು 13 ಸಭೆ ನಡೆಸಿದ್ದೇನೆ. ಸಚಿವ ರಮೇಶ್‌ಕುಮಾರ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಆರೋಗ್ಯ ಸರಿಯಿಲ್ಲದ ಕಾರಣ ಸಭೆಗೆ ಬಂದಿಲ್ಲ. ಬೇರೆಯವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು  ಹೇಳಿದರು.

ಗುಜರಾತ್ ಶಾಸಕರು ಭೀಕರ ನೆರೆ, ಪ್ರವಾಹದ ಸಂದರ್ಭದಲ್ಲಿ ಇಲ್ಲಿಗೆ ಬಂದು ಮೋಜು ಮಸ್ತಿ ಮಾಡುತ್ತಿದ್ದರು ಎಂದು ಪ್ರಧಾನಿ ನರೇಂದ್ರಮೋದಿ ಮಾಡಿದ ಟೀಕೆಗೆ ತಿರುಗೇಟು ನೀಡಿದ ಶಿವಕುಮಾರ್, ಈ ಹಿಂದೆ ಇಲ್ಲಿನ ಶಾಸಕರನ್ನು ಗೋವಾ, ಹೈದರಾಬಾದ್‌ಗೆ ಕರೆದುಕೊಂಡು ಹೋಗಿರಲಿಲ್ಲವೇ. ನಾವೂ ಕೂಡ ಬಂದ ಅತಿಥಿಗಳನ್ನು ಸತ್ಕರಿಸಿದ್ದೇವೆ, ಇದರಲ್ಲಿ ತಪ್ಪೇನಿದೆ ಎಂದರು.

ಸದನ ಸಮಿತಿಗೆ 11 ಸದಸ್ಯರನ್ನು ನೇಮಿಸಲಾಗಿದೆ. ಆದರೆ, ಇಂದಿನ ಸಭೆಗೆ ಸಚಿವ ಶಿವಕುಮಾರ್, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಶಿವಾನಂದಪಾಟೀಲ್, ಹಿರಿಯ ಅಧಿಕಾರಿಗಳು ಹೊರತುಪಡಿಸಿ ಬೇರೆ ಸದಸ್ಯರು ಹಾಜರಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News