×
Ad

ಸದೃಢ ಯುವ ಮನಸಿನಿಂದ ಮಾತ್ರ ದೇಶ ಕಟ್ಟಲು ಸಾಧ್ಯ: ಡಾ.ಅರಳುಮಲ್ಲಿಗೆ ಪಾರ್ಥಸಾರಥಿ

Update: 2017-10-30 22:20 IST

ಬೆಂಗಳೂರು, ಅ.30: ವಿಶಾಲವಾಗಿ ಯೋಚಿಸುವ, ಜನರನ್ನು ಪ್ರೀತಿಸುವ, ಸಾಧನೆಗಾಗಿ ಸದಾ ತುಡಿಯುವ ಸದೃಢವಾದ ಯುವ ಮನಸುಗಳಿಂದ ಮಾತ್ರ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವೆಂದು ಹರಿದಾಸ ಪಂಡಿತ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಪ್ರಾಯಿಸಿದ್ದಾರೆ.

ಸೋಮವಾರ ಸ್ನೇಹ ಬುಕ್ ಹೌಸ್ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ವೇಣುಗೋಪಾಲರವರ ‘ಎಂಪವರ್ ಯುವರ್ ಮೈಂಡ್ ಆ್ಯಂಡ್ ಸಕ್ಸೀಡ್’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತದಲ್ಲಿ ಶೇ.50ರಷ್ಟು ಯುವಶಕ್ತಿಯಿದೆ. ಇವರ ಚಿಂತನೆಗಳನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುವಂತಹ ಮಾರ್ಗದರ್ಶನದ ಅಗತ್ಯವಿದೆ ಎಂದು ತಿಳಿಸಿದರು.

ಭಾರತದಲ್ಲಿರುವಷ್ಟು ಯುವ ಶಕ್ತಿ ಜಪಾನ್ ಇಲ್ಲವೆ ಜರ್ಮನಿಯಲ್ಲಿ ಇದ್ದಿದ್ದರೆ ಈಗಿರುವುದಕ್ಕಿಂತ ಹತ್ತುಪಟ್ಟು ಅಭಿವೃದ್ಧಿಯನ್ನು ಸಾಧಿಸುತ್ತಿದ್ದೆವು. ಭಾರತದಲ್ಲಿ ಅಪಾರವಾದ ಸಂಪತ್ತಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಹ ಸದೃಢವಾದ ಮನಸು ಇಲ್ಲದ ಕಾರಣ ಇಂದಿಗೂ ನಾನಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನರಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮದು ಹತ್ತು ಸಾವಿರ ವರ್ಷಗಳಷ್ಟು ಇತಿಹಾಸವಿರುವ ದೇಶವಾಗಿದೆ. ನಮ್ಮಷ್ಟು ಶ್ರೀಮಂತ ಪರಂಪರೆಯನ್ನು ಹೊಂದಿರುವ ದೇಶ ಮತ್ತೊಂದು ಇಲ್ಲ. ಆದರೆ, ಈ ಬಗ್ಗೆ ತಿಳಿಯುವಂತಹ ಕುತೂಹಲವೂ ನಮ್ಮಲ್ಲಿ ಇಲ್ಲ. ಹೀಗಾಗಿಯೇ ಯಾವುದೇ ಕನಸುಗಳಿಲ್ಲದೆ ವೈಯಕ್ತಿಕ ಜೀವನಕ್ಕೆ ಮಾತ್ರ ಸೀಮಿತಗೊಂಡು ನಿಸ್ಸಾಯಕವಾಗಿ ಬದುಕುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಅಧ್ಯಾಯನದ ಪ್ರಕಾರ ದೇಶದ ಶೇ.90ರಷ್ಟು ಜನತೆ ಕೇವಲ ಆಹಾರ ಹಾಗೂ ದೈಹಿಕ ಸೌಂದರ್ಯದತ್ತ ಮಾತ್ರ ಯೋಚಿಸುತ್ತಾರೆಯೇ ವಿನಃ ನಮ್ಮ ಮನಸಿನ ಚಿಂತನೆಗಳನ್ನು ಆರೋಗ್ಯವಾಗಿ, ಚುರುಕಾಗಿ ಇಟ್ಟುಕೊಳ್ಳುವುದರತ್ತ ಗಮನವೇ ಕೊಡುವುದಿಲ್ಲ. ಇದರಿಂದಾಗಿ ನಮ್ಮ ಚಿಂತನೆಗಳು ಕೇವಲ ವೈಯಕ್ತಿಕ ಬದುಕಿಗೆ ಮಾತ್ರ ಸೀಮಿತಗೊಂಡಿರುತ್ತದೆ ಎಂದು ವಿಷಾದಿಸಿದರು.

ಪ್ರತಿಯೊಬ್ಬರ ಮನಸಿನಲ್ಲಿ ಅಗಾಧವಾದ ಶಕ್ತಿಯಿದೆ. ಅದನ್ನು ಸರಿಯಾಗಿ ಬಳಸಿಕೊಂಡವನು ಸಾಹಿತಿಯಾಗಿ, ವಿಜ್ಞಾನಿಯಾಗಿ, ಕ್ರೀಡಾಪಟುವಾಗಿ ತಾನಿಚ್ಚಿಸುವ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುತ್ತಾನೆ. ಹೀಗಾಗಿ ಯುವ ಜನತೆ ಮನಸನ್ನು ಸದೃಢವಾಗಿ ಇಟ್ಟುಕೊಳ್ಳುವ ಮೂಲಕ ವಿವಿಧ ಕ್ಷೇತ್ರದಲ್ಲಿ ಸಾಧಕರಾಗಬೇಕು ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್, ಉಪನ್ಯಾಸಕಿ ಪುಷ್ಪ ಪ್ರಿಯಾದರ್ಶಿನಿ, ಕೃತಿಕಾರ ವೇಣುಗೋಪಾಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News