ಸಿಐಡಿ ವರದಿ ಬಿಟ್ಟು, ಪೂರಕ ದಾಖಲೆಗಳಿದ್ದರೆ ಕೊಡಿ: ಡಾ.ಮೈತ್ರಿಗೆ ಹೈಕೋರ್ಟ್ ಮೌಖಿಕ ನಿರ್ದೇಶನ
ಬೆಂಗಳೂರು, ಅ.30: 2011ರ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಆಕ್ಷೇಪಣೆಗೆ(ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ) ಸಂಬಂಧಿಸಿದಂತೆ ಸಿಐಡಿ ವರದಿ ಬಿಟ್ಟು ಬೇರೆ ಯಾವುದಾದರೂ ಪೂರಕ ದಾಖಲೆಗಳಿದ್ದರೆ ಕೊಡಿ ಎಂದು ಡಾ.ಮೈತ್ರಿ ಅವರಿಗೆ ಹೈಕೋರ್ಟ್ ಮೌಖಿಕವಾಗಿ ನಿರ್ದೇಶಿಸಿದೆ.
2011ರ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಕೆಪಿಎಸ್‌ಸಿ ಮೂಲಕ ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ಮುಂದುವರಿಸಿತು.
ಮೈತ್ರಿ ಪರ ಹಿರಿಯ ವಕೀಲ ಉದಯ ಹೊಳ್ಳ ಅವರ ವಾದವನ್ನು ಆಲಿಸಿದ ನ್ಯಾಯಪೀಠ, ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಬರಿ ಸಿಐಡಿ ವರದಿಯೊಂದನ್ನೇ ಉಲ್ಲೇಖಿಸುತ್ತೀರಲ್ಲಾ ಎಂದು ಹೊಳ್ಳ ಅವರನ್ನು ಪ್ರಶ್ನಿಸಿತು.
ಸಿಐಡಿ ವರದಿಯಲ್ಲಿ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯರಿಗೆ ಸಾವಿರಕ್ಕೂ ಹೆಚ್ಚು ಬಾರಿ ದೂರವಾಣಿ ಕರೆ ಮಾಡಿದ್ದರು ಎಂದು ಹೇಳುತ್ತೀರಿ. ಈ ಕರೆಗಳಲ್ಲಿ ಸದಸ್ಯೆ ಮಂಗಳಾ ಶ್ರೀಧರ್ ಅವರು ನಿಮ್ಮ ಅರ್ಜಿದಾರರಾದ ಡಾ.ಮೈತ್ರಿಗೆ ಕರೆ ಮಾಡಿದ್ದರೆ ಅಥವಾ ಡಾ.ಮೈತ್ರಿಯೇ ಮಂಗಳಾ ಶ್ರೀಧರ್ ಅವರಿಗೆ ಕರೆ ಮಾಡಿದ್ದರೇ ಎಂಬುದರ ವಿವರ ಕೊಡಿ ಎಂದೂ ಹೊಳ್ಳ ಅವರನ್ನು ಕೇಳಿತು.
ನನಗೆ ಕೇಸಿನ ಮೆರಿಟ್ (ಯೋಗ್ಯತೆ) ಮೇಲಿನ ವಾದ ಬೇಕಾಗಿಲ್ಲ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ವಿಚಾರಣೆಗೆ ಅರ್ಹ ಹೌದೊ ಅಲ್ಲವೊ ಎಂಬುದನ್ನು ಮಾತ್ರವೇ ವಿಶದಪಡಿಸಿ ಎಂದು ನ್ಯಾಯಪೀಠ ಪುನುರುಚ್ಚರಿಸಿತು.
ನಿಯಮ ಪಾಲಿಸಿಲ್ಲ: ವಿಚಾರಣೆ ವೇಳೆ ಹಿರಿಯ ವಕೀಲ ಕೆ.ಜಿ.ರಾಘವನ್, ಹೊಳ್ಳ ಅವರ ವಾದಕ್ಕೆ ಪೂರಕವಾಗಿ, ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ), ಸರಕಾರಕ್ಕೆ ಕೆಪಿಎಸ್‌ಸಿ ನಿಯಮ 1997ರ 11 (1), (2) ಮತ್ತು (3)ರ ಅನುಸಾರ ನೇಮಕಾತಿ ಆದೇಶ ನೀಡಿ ಎಂದು ಹೇಳಿದೆ. ಆದರೆ, ಸರಕಾರ ನಿಯಮ 11 (1)ರ ಪ್ರಕಾರ ಕೆಪಿಎಸ್‌ಸಿ ಕಳುಹಿಸಿದ ಪಟ್ಟಿಯಲ್ಲಿರುವವರಿಗೆ ನೋಟಿಸ್ ನೀಡಿಲ್ಲ. ಅವರ ಪೂರ್ವಾಪರಗಳ ಪರಿಶೀಲನೆ ತನಿಖೆ ನಡೆಸಿಲ್ಲ ಎಂದು ಆಕ್ಷೇಪಿಸಿದರು.
ಸರಕಾರಕ್ಕೆ ಪ್ರಶ್ನೆ: ಸಿಐಡಿಯ ಮಧ್ಯಂತರ ವರದಿ ಅನುಸಾರ ಆಯ್ಕೆ ಪಟ್ಟಿ ವಾಪಸ್ ಪಡಿದಿದ್ದೀರಿ. ಆದಾದ ಮೇಲೆ ಚಾರ್ಜ್‌ಶೀಟ್ ಹಾಕಲಾಗಿದೆ ಎಂದು ಹೇಳುತ್ತೀರಿ. ಅದಾದ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿತು.
ಇದಕ್ಕೆ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೋಂಧಿ ಅವರು, ನಾಳೆ (ಅ.31) ವಿವರ ನೀವುತ್ತೇನೆ ಎಂದು ತಿಳಿಸಿದರು.
ವಿಚಾರಣೆಯನ್ನು ಅ.31ಕ್ಕೆ ಮುಂದೂಡಲಾಗಿದೆ.