×
Ad

ಬಿಬಿಎಂಪಿ 1756.42 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದೆ: ಗುಣಶೇಖರ್

Update: 2017-10-30 22:30 IST

ಬೆಂಗಳೂರು, ಅ.30: ಬಿಬಿಎಂಪಿಯೂ 1756.42 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿ ದಾಖಲೆ ಮಾಡಿದೆ ಎಂದು ಪಾಲಿಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಇಂದಿಲ್ಲಿ ಹೇಳಿದ್ದಾರೆ.

ಸೋಮವಾರ ನಗರದ ಬಿಬಿಎಂಪಿಯ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರು ತಿಂಗಳ ಕಾಲಾವಧಿಯಲ್ಲಿ ವಿವಿಧ ಬ್ಯಾಂಕ್‌ಗಳಿಂದ 467.61 ಕೋಟಿ ರೂ. ಚಾಲನ್‌ಗಳ ಮೂಲಕ 1,281.85 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಹಣಕಾಸು ವರ್ಷದ 6 ತಿಂಗಳ ಅವಧಿಯಲ್ಲೇ 1,756.42 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಶೇ. 68 ರಷ್ಟು ಸಾಧನೆ ಮಾಡಲಾಗಿದೆ ಎಂದರು.

14,75,407 ಆಸ್ತಿಗಳಿಂದ ಈ ತೆರಿಗೆ ಸಂಗ್ರಹವಾಗಿದ್ದು, ಪ್ರಸ್ತುತ ತಿಂಗಳಿನಲ್ಲಿಯೇ 12,39,477 ಆಸ್ತಿಗಳಿಂದ ತೆರಿಗೆ ವಸೂಲಾಗಿದೆ. ಅಂದರೆ, ಹಿಂದಿನ ದಾಖಲೆಗಳನ್ನು ಅಂಕಿ ಅಂಶಗಳಿಗೆ ಹೋಲಿಸಿದರೆ, 2 ಲಕ್ಷಕ್ಕೂ ಹೆಚ್ಚು ಆಸ್ತಿಯಿಂದ ತೆರಿಗೆ ಪಾವತಿಯಾಗಿದೆ ಎಂದು ವಿವರಿಸಿದರು.

ಆಸ್ತಿ ತೆರಿಗೆದಾರರು ವಿವಿಧ ಬ್ಯಾಂಕ್‌ಗಳಿಂದ ಚಲನ್‌ಗಳನ್ನು ಪಡೆದುಕೊಂಡಿದ್ದು, ಈ ವಾರದೊಳಗೆ 51 ಕೋಟಿ 71 ಲಕ್ಷದ 32 ಸಾರವಿ ರೂ. ತೆರಿಗೆ ಪಾಲಿಕೆ ಬೊಕ್ಕಸಕ್ಕೆ ಪಾವತಿಯಾಗಲಿದೆಯೆಂದು ಹೇಳಿದರು.

ಬಾಕಿ: ಟೋಟಲ್ ಸ್ಟೇಷನ್ ಸರ್ವೇ ಪ್ರಕಾರ ಬಿಬಿಎಂಪಿಯ ದಕ್ಷಿಣ ವಲಯದಲ್ಲಿ 4 ಕಟ್ಟಡಗಳಿಂದ ಮೂಲ ತೆರಿಗೆ ವ್ಯತ್ಯಾಸದ ಹಣ ಹಾಗೂ ದಂಡ ಸೇರಿದಂತೆ 36.31 ಕೋಟಿ ರೂ.ತೆರಿಗೆ ಹಣ ಬರಬೇಕಿದೆ. ಬೊಮ್ಮನಹಳ್ಳಿ ವಲಯದಲ್ಲಿ 5 ಕಟ್ಟಡದಿಂದ 21.20 ಕೋಟಿ ರೂ., ಮಹದೇವಪುರ ವಲಯದಲ್ಲಿ 3 ಕಟ್ಟಡದಿಂದ 95.99 ಕೋಟಿ ರೂ. ತೆರಿಗೆ ಬರಬೇಕು. ಈ ಸಂಬಂಧ ಕಟ್ಟಡದ ಮಾಲಕರಿಗೆ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಲಾಗಿದೆ. ನ್ಯಾಯಾಲಯಕ್ಕೆ ಮೊರೆ ಹೋಗದಂತೆ ಕೇವಿಯೆಟ್‌ಅನ್ನು ಪಾಲಿಕೆ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಅದೇ ರೀತಿ, ಪಾಲಿಕೆಯ ಸಂಪನ್ಮೂಲ ಕ್ರೋಡೀಕರಣ ದೃಷ್ಟಿಯಿಂದ ಸ್ವತ್ತು ತೆರಿಗೆ ವ್ಯಾಪ್ತಿಯಿಂದ ಕೈಬಿಟ್ಟು ಹೋಗಿರುವ ಪ್ರಕರಣಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಬಿಬಿಎಂಪಿ ವಿಭಜನೆ ತಜ್ಞರ ಸಮಿತಿಗೆ ವಹಿಸಿಕೊಡು ಸ್ವಯಂ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ನೇತೃತ್ವದ ತಜ್ಞರ ಸಮಿತಿಯು ತೆರಿಗೆ ವ್ಯಾಪ್ತಿಯಿಂದ ಕೈಬಿಟ್ಟು ಹೋಗಿರುವ ಪ್ರಕರಣಗಳನ್ನು ಪತ್ತೆಹಚ್ಚಿ ವರದಿ ಸಲ್ಲಿಸಲಿದೆ. ನಗರದ ಮಹದೇವಪುರ ವಲಯದ ಬೃಹತ್ ಕಟ್ಟಡಗಳಿಂದಲೇ 200 ಕೋಟಿ ರೂ. ತೆರಿಗೆ ಪಾಲಿಕೆಗೆ ನಷ್ಟವಾಗಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯ ಮಾರತಹಳ್ಳಿ, ವೈಟ್‌ಫೀಲ್ಡ್, ಕೂಡಿಬೊಮ್ಮನಹಳ್ಳಿ, ಅರಕೆರೆ, ಎಚ್‌ಎಸ್‌ಆರ್ ಬಡಾವಣೆ, ಬ್ಯಾಟರಾಯನಪುರ, ಕೊಡಿಗೆಹಳ್ಳಿ, ವಿದ್ಯಾರಣ್ಯಪುರಗಳಲ್ಲಿ ತೆರಿಗೆ ವ್ಯಾಪ್ತಿಯಿಂದ ಕೈಬಿಟ್ಟು ಹೋಗಿರುವ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಪಾಟೀಲ್ ನೇತೃತ್ವದ ಸಮಿತಿಗೆ ಪತ್ರ ಬರೆಯಲಾಗುವುದು ಎಂದು ಗುಣಶೇಖರ್ ಹೇಳಿದರು.

‘ತೆರಿಗೆ ನಷ್ಟ ಮಾಡಿದ ಕಟ್ಟಡಗಳಿವು’
ನಗರದಲ್ಲಿರುವ ದಿವ್ಯಶ್ರೀ ಕಟ್ಟಡದಿಂದ 34.75 ಕೋಟಿ ರೂ. ತೆರಿಗೆ ಬಾಕಿ ಉಳಿದಿದೆ. ಶಾಮರಾಜ ಕಂಪೆನಿಯೂ 50.76 ಕೋಟಿ ರೂ. ಬಾಕಿ ಉಳಿದಿದೆ, ಇನ್ನು ಬ್ರಿಗೇಡ್ ಎಂಟರ್ ಪ್ರೈಸಸ್, ಶೋಭಾ ಡೆವಲಪರ್ಸ್, ಮಂತ್ರಿ ಡೆವಲಪರ್ಸ್ ಕಟ್ಟಡಗಳಿಂದಲೂ ತೆರಿಗೆ ಬಾಕಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News