‘ನಾನು ನಿಮ್ಮ ಜಾತಿಯವನೇ, ಕ್ರಿಮಿನಲ್‌ಗಳನ್ನು ಪೋಷಿಸುವುದನ್ನು ಬಿಡಿ’
ಬೆಂಗಳೂರು, ಅ.30: ಕೊಲೆ ಯತ್ನ- ಅಪಹರಣ ಪ್ರಕರಣ ಸಂಬಂಧ ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ಎನ್.ಎಸ್.ವಿನಯ್ ಸ್ವಯಂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಅಪಹರಣ ಪ್ರಕರಣ ಸಂಬಂಧ ಹಾಗೂ ಪ್ರಕರಣದ ಪ್ರಮುಖ ಆರೋಪಿ ಎನ್.ಆರ್.ಸಂತೋಷ್‌ನನ್ನು ಪೋಷಿಸದೆ ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಡಿ ಹಾಗೂ ನಾನು ನಿಮ್ಮದೇ ಜಾತಿಯವನೇ ಆಗಿದ್ದೇನೆ ಎಂದೆಲ್ಲಾ ಉಲ್ಲೇಖಿಸಿ ಮೂರು ಪುಟಗಳ ಪತ್ರ ಬರೆದಿರುವ ಎನ್.ಎಸ್. ವಿನಯ್ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಪತ್ರದಲ್ಲಿ ಹೀಗಿದೆ: ಬಿ.ಎಸ್.ಯಡಿಯೂರಪ್ಪ ಸಾಹೇಬರೆ, ಎನ್.ಎಸ್.ವಿನಯ್ ಆದ ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ನೀವೇ ನೇಮಕ ಮಾಡಿದ್ದ ಬಿಜೆಪಿ ಮಾಧ್ಯಮ ಸಹ ಸಂಚಾಲಕನಾದ ನಾನು ತಮ್ಮಲ್ಲಿ ನಿವೇದಿಸುವುದೇನೆಂದರೆ ಮೇ.11ರಂದು ನಗರದ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನನ್ನ ಮೇಲೆ ಹಾಡು ಹಗಲೇ ಅಪಹರಣ ಪ್ರಯತ್ನ ನಡೆಸಿ ವಿಫಲಗೊಂಡಾಗ ಮಾರಣಾಂತಿಕ ಹಲ್ಲೆ ನಡೆಸಿ ನನ್ನ ಎಡಗೈ ಮೂಳೆ ಮುರಿದಿರುತ್ತಾರೆ.
ಮೊದಲು ಯಾರೋ ಅಪರಿಚತರೆಂದು ತಿಳಿದು ಪೊಲೀಸರಿಗೆ ದೂರನ್ನು ನೀಡಿರುತ್ತೇನೆ. ನಂತರ ಪೊಲೀಸ್ ತನಿಖೆಯಲ್ಲಿ ನನಗೆ ತಿಳಿದ ವಿಷಯವೆಂದರೆ ‘ನನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳು ತಮ್ಮ ಆಪ್ತರಾಗಿರುವರು.’ ಹಾಗೂ ಹಲ್ಲೆ ನಡೆಸಲು ಸುಪಾರಿ ಕೊಟ್ಟಿರುವುದು ಈಗಾಗಲೇ ತಾವಾಗಿಯೇ ಹೇಳಿಕೊಂಡಿರುವ ತಮ್ಮ ಆಪ್ತ ಸಹಾಯಕ ‘ಎನ್.ಆರ್.ಸಂತೋಷ್’ ಎಂದು ತಿಳಿದು ಬಂದಿರುತ್ತದೆ.
ಇದನ್ನು ತಿಳಿದು ನನ್ನ ಮನಸ್ಸಿಗೆ ಬಹಳ ಆಘಾತವಾಗಿರುತ್ತದೆ. ಏಕೆಂದರೆ ತಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ತಮ್ಮ ಮನೆಯಲ್ಲಿಯೇ ನನ್ನ ಕೊಲೆ ಸಂಚು ರೂಪಿಸಿ ಅಪಹರಣ ಮಾಡಲು ಪ್ರಯತ್ನಿಸಿ ವಿಫಲಗೊಂಡಾದ ಮೇಲೆ ಹಲ್ಲೆ ಮಾಡಿರುವುದು ಅತ್ಯಂತ ನೋವಿನ ವಿಚಾರ.
ನಾನು ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಬಿಜೆಪಿ ಪಕ್ಷಕ್ಕೆ ನನ್ನ ಮೊಬೈಲ್ ಮೂಲಕ ಮಿಸ್ ಕಾಲ್ ಕೊಟ್ಟು ಸದಸ್ಯನಾಗಿ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ. ಹಾಗೂ ನಾನು ನಿಮ್ಮ ಜಾತಿಯವನೇ(ವೀರಶೈವ ಲಿಂಗಾಯುತ)ಆಗಿದ್ದು, ಬೆಂಗಳೂರಿನಲ್ಲಿ ನನ್ನ ಹೆಂಡತಿ ಹಾಗೂ ಎರಡು ಪುಟ್ಟ ಅವಳಿ-ಜವಳಿ ಹೆಣ್ಣು ಮಕ್ಕಳೊಂದಿಗೆ ಪುಟ್ಟ ಸಂಸಾರದೊಂದಿಗೆ ಕಷ್ಟಪಟ್ಟು ದುಡಿಮೆ ಮಾಡಿಕೊಂಡು ಸಂಸಾರ ಮಾಡಿಕೊಂಡು ಇದ್ದಂತಹ ವ್ಯಕ್ತಿಯಾಗಿದ್ದು, ನಿಮ್ಮ ಆಪ್ತ ಸಹಾಯಕ ಸಂತೋಷ್ ಮತ್ತು ಇತರರು ನನ್ನ ಮೇಲೆ ಯತ್ನ ನಡೆಸಿ ಹಲ್ಲೆ ಮಾಡಿರುವುದು ಇಡೀ ನನ್ನ ಕುಟುಂಬ ಆಘಾತಕ್ಕೊಳಗಾಗಿದೆ.
ಒಮ್ಮೆ ಮುಖ್ಯಮಂತ್ರಿಯಾದವರು ಹಾಗೂ ಬಿಜೆಪಿ ಪಕ್ಷದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿರುವವರು, ನನ್ನಂತಹ ಸಾಮಾನ್ಯ ಕಾರ್ಯಕರ್ತರ ನೋವಿಗೆ ಸ್ಪಂದಿಸುತ್ತೀರಾ ಎಂದು ಭಾವಿಸಿರುತ್ತೇನೆ. ಈಗಾಗಲೇ ನಿಮ್ಮ ಆಪ್ತ ಸಹಾಯಕರಾದ ಈ ಪ್ರಕರಣದ ಪ್ರಮುಖ ಆರೋಪಿ ಎನ್.ಆರ್.ಸಂತೋಷ್‌ನಿಂದ ಬಿಜೆಪ ಪಕ್ಷ ತಲೆತಗ್ಗಿಸುವಂತೆ ಮಾಡಿರುವುದು ಅತ್ಯಂತ ನೋವಿನ ಸಂಗತಿ.
ಈಗ ಮತ್ತೆ ಅದಕ್ಕೆ ಅವಕಾಶ ಕೊಡದೆ ನನ್ನ ಮೇಲೆ ಕೊಲೆ ಯತ್ನ, ಅಪಹರಣ ಪ್ರಕರಣದ ಆರೋಪಿ ಸಂತೋಷ್‌ನನ್ನು ಪೋಷಿಸದೆ ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಟ್ಟು ರಾಜ್ಯ ಜನತೆಯ ಮುಂದೆ ಕ್ರಿಮಿನಲ್‌ಗಳನ್ನು ನಾವು ಎಂದಿಗೂ ಪೋಷಿಸುವುದಿಲ್ಲ ಹಾಗೂ ರಕ್ಷಿಸುವುದಿಲ್ಲ ಎಂದು ಮನದಟ್ಟು ಮಾಡಿಕೊಡುವುದರ ಮೂಲಕ ನನಗೆ ನ್ಯಾಯ ದೊರಕಿಸಿಕೊಡಿ ಎಂದು ಎನ್.ಎಸ್.ವಿನಯ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.