ಸಿಎಂ ನನ್ನನ್ನು ಹೆದರಿಸಲು ಮುಂದಾಗಿದ್ದಾರೆ: ಶೋಭಾ ಕರಂದ್ಲಾಜೆ
ಬೆಂಗಳೂರು, ಅ.31: ನನ್ನ ಅಧಿಕಾರ ಅವಧಿ ವೇಳೆ ವಿದ್ಯುತ್ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳು ನಡೆದಿಲ್ಲ. ಆದಾಗ್ಯು 2004ರ ಬಳಿಕ ವಿದ್ಯುತ್ ಖರೀದಿಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸದನ ಸಮಿತಿಯ ವರದಿಯನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯನವರು ನನ್ನನ್ನು ಹೆದರಿಸಲು ಮುಂದಾಗಿದ್ದಾರೆ ಎಂದು ಮಾಜಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನ ಸಮಿತಿಯ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಿ. ಒಂದು ವೇಳೆ ಅವ್ಯವಹಾರಗಳಾಗಿರುವುದು ಕಂಡು ಬಂದರೆ ಸಿಬಿಐ ತನಿಖೆಗೆ ಒಳಪಡಿಸಲಿ ಎಂದು ಸವಾಲು ಹಾಕಿದರು.
ನನ್ನ ಆಡಳಿತಾವಧಿಯಲ್ಲಿ ಜಿಂದಾಲ್ ಕಂಪೆನಿಯಿಂದ 25ವರ್ಷಗಳ ವಿದ್ಯುತ್ ಖರೀದಿಗೆ ಬೇಡಿಕೆ ಬಂದಿತ್ತು. ನಮ್ಮ ಇಲಾಖೆಯ ವತಿಯಿಂದಲೇ ನಮಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಭಾವಿಸಿ ಆ ಒಪ್ಪಂದವನ್ನು ನಿರಾಕರಿಸಿದೆ. ಆದರೆ, ಸಿದ್ದರಾಮಯ್ಯನವರ ಸರಕಾರ ಈಗಲೂ ಜಿಂದಾಲ್‌ನಿಂದ ವಿದ್ಯುತ್ ಖರೀದಿ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರಕಾರ ಎಂಟಾ ಕಂಪೆನಿಗೆ ಟೆಂಡರ್ ಕರೆಯದೇ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಯರಮರಸ್ ಹಾಗೂ ಬಳ್ಳಾರಿಯಲ್ಲಿರುವ ವಿದ್ಯುತ್ ಘಟಕಗಳನ್ನು ಎಲ್ಲ ಸೌಲಭ್ಯಗಳಿದ್ದರೂ ಸ್ಥಗಿತಗೊಳಿಸಿರುವುದು ಯಾಕೆಂದು ರಾಜ್ಯ ಸರಕಾರ ಜನತೆಗೆ ತಿಳಿಸಬೇಕೆಂದು ಅವರು ಒತ್ತಾಯ ಮಾಡಿದರು.
'ಭಕ್ತರಿಗೆ ಅವಮಾನ ಮಾಡಿದ್ದಾರೆ'
ನನ್ನ ಕಂಡರೆ ಪ್ರಧಾನಿ ನರೇಂದ್ರ ಮೋದಿಗೆ ಭಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಚಾರವಿಲ್ಲದ ನಾಲಗೆಯಿಂದ ಇಂತಹ ಮಾತುಗಳು ಸಾಮಾನ್ಯವಾಗಿರುತ್ತದೆ. ನಮ್ಮ ಪ್ರಧಾನಿ ಉಪವಾಸವಿದ್ದು ಧರ್ಮಸ್ಥಳಕ್ಕೆ ಪ್ರವೇಶ ಮಾಡಿದ್ದರೆ, ಸಿದ್ದರಾಮಯ್ಯ ಮೀನು, ಕೋಳಿ ತಿಂದು ದೇವರ ದರ್ಶನ ಮಾಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಭಕ್ತರಿಗೆ ಅವಮಾನ ಮಾಡಿದ್ದಾರೆ.-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ