ಕೋಮುವಾದಿ ಪಕ್ಷಗಳ ಜತೆ ಕೈ ಜೋಡಿಸುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಅ.31: ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಕೋಮುವಾದಿ ಪಕ್ಷಗಳ ಜತೆ ಕೈ ಜೋಡಿಸುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅನ್ವರ್ ಶರೀಫ್ ಆಯೋಜಿಸಿದ್ದ ಮುಸ್ಲಿಮ್ ಸಂಘಟನೆಗಳ ಪ್ರಮುಖರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ಬಿಜೆಪಿ ಜತೆ ಹೋಗಿಲ್ಲ. ಜೆಡಿಎಸ್ ಪಕ್ಷವನ್ನು ಉಳಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಅದಕ್ಕಾಗಿ ಬಿಜೆಪಿ ಜೊತೆ ಹೋಗಬೇಕಾಯಿತು. ನನ್ನ ನಿರ್ಧಾರದಿಂದಾಗಿ ನನ್ನ ತಂದೆ ದೇವೇಗೌಡರ ಮನಸ್ಸನ್ನು ತುಂಬಾ ನೋಯಿಸಿದ್ದೇನೆ ಎಂದು ಹೇಳಿದರು.
ಕೋಮುವಾದಿ ಪಕ್ಷಗಳ ಜತೆ ಕೈ ಜೋಡಿಸುವುದಿರಲಿ, ಚುನಾವಣಾ ಪೂರ್ವ ಅಥವಾ ನಂತರ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ. ಮುಸ್ಲಿಮ್ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಅನುಕೂಲ, ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದು. ಶೈಕ್ಷಣಿಕವಾಗಿ ಹಿಂದುಳಿದಿರುವ ಹಾಗೂ ಸಮಸ್ಯೆಗಳಿಗೆ ಸಿಲುಕಿರುವವರಿಗೆ ಭದ್ರತೆ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ರಾಜ್ಯದ ಮತದಾರರು ಒಮ್ಮೆ ಬಿಜೆಪಿಗೆ ಮತ್ತೊಮ್ಮೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸುವ ಅವಕಾಶ ಮಾಡಿಕೊಟ್ಟಿದ್ದಾರೆ. ಒಂದು ಬಾರಿ ಪ್ರಾದೇಶಿಕ ಜಾತ್ಯತೀತ ಪಕ್ಷವಾಗಿರುವ ಜೆಡಿಎಸ್‌ಗೆ ಆಶೀರ್ವಾದ ಮಾಡಿ. ಅತಂತ್ರ ಸ್ಥಿತಿ ನಿರ್ಮಾಣ ಮಾಡದೇ, ಜೆಡಿಎಸ್ ಸರಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಮಾತನಾಡಿ, ಕಾಂಗ್ರೆಸ್ ಪಕ್ಷ ತನ್ನನ್ನು ಜಾತ್ಯತೀತ ಎಂದು ಬಿಂಬಿಸಿಕೊಳ್ಳುತ್ತದೆ. ಅಲ್ಲದೆ, ಮುಸ್ಲಿಮರನ್ನು ಕೇವಲ ಓಟ್ ಬ್ಯಾಂಕ್‌ಗೆ ಸೀಮಿತಗೊಳಿಸಿದ್ದಾರೆ. ಅಸ್ಸಾಂ, ಬಾಬರಿ ಮಸೀದಿ, ದತ್ತಪೀಠದ ವಿಚಾರದಲ್ಲಿ ಮುಸ್ಲಿಮರಿಗೆ ನ್ಯಾಯ ನೀಡಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ನೇತೃತ್ವದ ಸರಕಾರವೇ ಸಾಚಾರ್ ಸಮಿತಿಯನ್ನು ರಚನೆ ಮಾಡಿ, ವರದಿಯನ್ನು ಪಡೆದುಕೊಂಡಿತ್ತು. ಆದರೆ, ಈಗ ಆ ವರದಿಯು ಶೈತ್ಯಾಗಾರಕ್ಕೆ ಹೋಗಿದೆ. ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ, ಒಂದು ತಿಂಗಳಲ್ಲಿ ಸಾಚಾರ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವುದಾಗಿ ಈಗಾಗಲೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ನಿರಂತರವಾಗಿ ಗಲಭೆಗಳು ನಡೆಯುತ್ತಿವೆ. ಒಬ್ಬ ಕೋಮುವಾದಿ ಮುಖಂಡನಿಗೆ ಇಡೀ ರಾಜ್ಯ ಸರಕಾರವೇ ಭಯಪಡುತ್ತಿದೆ. ಇದನ್ನು ಜಾತ್ಯತೀತ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಕೋಮುವಾದಿಗಳಿಗೆ ಅಂಕುಶ ಹಾಕಿ, ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡುತ್ತೇವೆ ಎಂದರು.
ನಮ್ಮದು ಕೃಷಿ ಪ್ರಧಾನ ರಾಜ್ಯ. ರೈತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ನಗರ ಪ್ರದೇಶಗಳಲ್ಲಿ ಮೂಲಭೂತಸೌಕರ್ಯಗಳಿಗೆ ಒತ್ತು ನೀಡಲಾಗುವುದು. ದೂರದೃಷ್ಟಿಯ ನಾಯಕರಾಗಿರುವ ದೇವೇಗೌಡರ ಮಾರ್ಗದರ್ಶನದಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಉಪಾಧ್ಯಕ್ಷ ಜೆ.ಶಫೀವುಲ್ಲಾ, ಮುಖಂಡರಾದ ಮೋಹಿದ್ ಅಲ್ತಾಫ್, ತನ್ವೀರ್, ಮುಖ್ತಾರ್ ಅಹ್ಮದ್ ಸೇರಿದಂತೆ ವಿವಿಧ ಪ್ರಮುಖ ಮುಸ್ಲಿಮ್ ಸಂಘಟನೆಗಳ, ಸಂಘಸಂಸ್ಥೆಗಳ ಮುಖಂಡರು, ಪತ್ರಕರ್ತರು, ಬುದ್ಧಿಜೀವಿಗಳು ಹಾಗು ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.