ದಲಿತ, ಹಿಂದುಳಿದ ಮಠಗಳಿಗೆ ಭೂಮಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಅ. 31: ದಲಿತ ಮತ್ತು ಹಿಂದುಳಿದ ಸಮುದಾಯದ ಮಠಗಳಿಗೆ ಬೆಂಗಳೂರು ನಗರದಲ್ಲಿ ಭೂಮಿ ಹಾಗೂ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಇಲ್ಲಿನ ಜಯಮಹಲ್ ಬಡಾವಣೆಯಲ್ಲಿನ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ನಿವಾಸದಲ್ಲಿ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶೋಷಿತ ಮಠಗಳಿಗೆ ಅನುದಾನ ಒದಗಿಸುವ ಆಶ್ವಾಸನೆ ನೀಡಿದ್ದಾರೆಂದು ತಿಳಿದು ಬಂದಿದೆ.
ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ದಲಿತ-ಹಿಂದುಳಿದ ಸಮುದಾಯಗಳು ಸಮಸ್ಯೆಗಳಲ್ಲೇ ಅಭಿವೃದ್ಧಿ ಕಾಣಬೇಕಿದೆ. ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಿದ್ದರಾಮಯ್ಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಶೋಷಿತರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಸ್ವಾಮೀಜಿಗಳು ಮನವಿ ಮಾಡಿದ್ದಾರೆ.
ಉಪ್ಪಾರ ಸಮಾಜವನ್ನು ಎಸ್ಟಿಗೆ ಸೇರಿಸಬೇಕು. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಉಪ್ಪಾರ ಸಮಾಜದವರನ್ನು ಮೇಲ್ಮನೆ ಸದಸ್ಯರನ್ನಾಗಿ ನೇಮಿಸಬೇಕು. ಕುರುಬ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕು. ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಗೊಲ್ಲರನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಲಾಗಿದೆ.
ಕುಂಚಿಟಗ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೆ ಶಿಫಾರಸು ಮಾಡಬೇಕು. ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ತಿಗಳ ಜನಾಂಗವನ್ನು ಪ್ರವರ್ಗ 1ಕ್ಕೆ ಸೇರಿಸಬೇಕು. ಕುರುಬ ಮತ್ತು ಗಂಗಾಮತಸ್ಥರು ಹಾಗೂ ಛಲವಾದಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
‘ರಾಜಕೀಯ ವಿರೋಧಿಗಳ ಟೀಕೆಗಳಿಗೆ ಎದೆಗುಂದದೆ ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಮ್ಮ ದೃಢ ಸಂಕಲ್ಪವನ್ನು ಮುಂದುವರೆಸಿ, ಅಹಿಂದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗೆ ನಿಮ್ಮ ಪ್ರಯತ್ನ ಮುಂದುವರಿಸಿ, ನಿಮ್ಮಿಂದಿಗೆ ನಾವಿದ್ದೇವೆ ಎಂದು ಸ್ವಾಮೀಜಿಗಳು ಸಿದ್ದರಾಮಯ್ಯನವರಿಗೆ ಬೆಂಬಲ ಘೋಷಿಸಿದ್ದಾರೆಂದು ಹೇಳಲಾಗಿದೆ.
ಸಚಿವ ಆಂಜನೇಯ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮಠಾಧೀಶರಿಗೆ ವಿಶೇಷ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಠಾಧೀಶರ ಒಕ್ಕೂಟದ ಗೌರವಾಧ್ಯಕ್ಷ ಭಗೀರಥ ಉಪ್ಪಾರ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮಿ, ಅಧ್ಯಕ್ಷ ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮಿ, ಉಪಾಧ್ಯಕ್ಷ ಯಾದವ ಮಠದ ಕೃಷ್ಣಯಾದವ ಸ್ವಾಮಿ, ಆದಿಜಾಂಬವ ಮಠದ ಸ್ವಾಮಿ, ಚಲವಾದಿ ಗುರುಪೀಠದ ಸ್ವಾಮಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮಿ ಸೇರಿ 35ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.
ಒಳ ಮೀಸಲಾತಿ ವರ್ಗೀಕರಣ ಸಂಬಂಧದ ನ್ಯಾ.ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಬೇಕು. ವಿದೇಶಕ್ಕೆ ದಲಿತ ಕಲಾವಿದರನ್ನು ಕಳುಹಿಸುವ ನೆಪದಲ್ಲಿ ಎಸ್ಸಿಪಿ-ಟಿಎಸ್ಪಿ ಅನುದಾನದ ದುರ್ಬಳಕೆ ತಪ್ಪಿಸಬೇಕು. ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಆಂಜನೇಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
-ನಾಗೇಶ್ ,ದಲಿತ ಕಲಾವಿದರ ಒಕ್ಕೂಟ