×
Ad

ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿಕೆಗೆ ಪೋಷಕರ ಒಕ್ಕೂಟ ಖಂಡನೆ

Update: 2017-10-31 21:28 IST

ಬೆಂಗಳೂರು, ಅ.31: ಶಿಕ್ಷಣ ಹಕ್ಕು ಕಾಯ್ದೆ ಜಾರಿಯಿಂದಲೇ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಹೀಗಾಗಿ, ಆರ್‌ಟಿಐ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಆರ್‌ಟಿಇ ವಿದ್ಯಾರ್ಥಿ ಮತ್ತು ಪೋಷಕರ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿ ಶಾಲೆಗಳು ಶ್ರೀಮಂತರ ಸ್ವತ್ತಾಗಿದ್ದು, ಹಣ ಗಳಿಸುವ ಉದ್ಯಮವನ್ನಾಗಿ ಮಾಡಿಕೊಂಡಿವೆ. ಈ ಸಂದರ್ಭದಲ್ಲಿ ಆರ್‌ಟಿಇ ಮೂಲಕ ಬಡ ಕುಟುಂಬಗಳ ಶೇ.25 ರಷ್ಟು ಮಕ್ಕಳಿಗೆ ಉಚಿತ ಶಿಕ್ಷಣ ಸಿಗುತ್ತಿದೆ. ಆದರೆ, ಆರ್‌ಟಿಇ ಜಾರಿ ಮಾಡಿರುವುದರಿಂದ ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ಹೇಳಿರುವುದು ಸರಿಯಲ್ಲ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ನೈರ್ಮಲ್ಯ ಹಾಗೂ ಗುಣಮಟ್ಟದ ಕೊರತೆಯಿಂದ ಪೋಷಕರು ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.

ಶಿಕ್ಷಣ ಇಲಾಖೆ ಪ್ರತಿ ವರ್ಷ ನೂರಾರು ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಲೇ ಬರುತ್ತಿದೆ. ಹೀಗಿರುವಾಗ ಕನ್ನಡ ಶಾಲೆಗಳನ್ನು ಉಳಿಸಲು ಹೇಗೆ ಸಾಧ್ಯ. ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು ಉಳಿಯಬೇಕಾದರೆ ಇನ್ನು 10 ವರ್ಷಗಳು ಯಾವುದೇ ಖಾಸಗಿ ಶಾಲೆಗೆ ಅನುಮತಿ ನೀಡಬೇಡಿ ಎಂದು ಎಸ್.ಜಿ.ಸಿದ್ದರಾಮಯ್ಯ ಸರಕಾರಕ್ಕೆ ಶಿಫಾರಸು ಸಲ್ಲಿಸಬೇಕು.

ಜತೆಗೆ, ಎಲ್ಲ ಸರಕಾರಿ ನೌಕರರು, ಎಲ್ಲ ಪಕ್ಷಗಳ ಮುಖಂಡರು, ಕನ್ನಡ ಪರ ಸಂಘಟನೆಗಳ ಹಾಗೂ ಎಲ್ಲ ಸಂಘ-ಸಂಸ್ಥೆಗಳ ಮುಖಂಡರು, ಕಸಾಪ ಸದಸ್ಯರು, ಸಾಹಿತಿ, ಚಿಂತಕರು, ಲೇಖಕರು, ಕನ್ನಡ ಹೋರಾಟಗಾರರ ಮಕ್ಕಳನ್ನು ಕಡ್ಡಾಯವಾಗಿ ಸರಕಾರಿ ಶಾಲೆಗೆ ಸೇರಿಸುವಂತೆ ಒತ್ತಾಯ ಮಾಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಬಿ.ಎನ್.ಯೋಗಾನಂದ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News