ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್

Update: 2017-10-31 17:23 GMT

ಬೆಂಗಳೂರು, ಅ.31: ನೂರು ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರ ಪ್ರಯಾಣ ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
     ಈ ಸಂಬಂಧ ಟಿವಿಎಸ್ ಮೋಟಾರ್ ಕಂಪೆನಿ ಲಿಮಿಟೆಡ್, ಹೀರೋ ಮೋಟೋ ಕಾರ್ಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
                        ಅರ್ಜಿದಾರರ ಪರ ವಾದಿಸಿದ ವಕೀಲ ಜಾರ್ಜ್ ಜೋಸಪ್ ಅವರು, ಕರ್ನಾಟಕ ಮೋಟಾರು ವಾಹನ ಕಾಯ್ದೆ 143ರ ಅನ್ವಯ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರ ಪ್ರಯಾಣವನ್ನು ರಾಜ್ಯ ಸರಕಾರ ನಿಷೇಧಿಸಿದೆ. ಆದರೆ, ಈಗಾಗಲೇ ಗ್ರಾಹಕರು 100 ಸಿಸಿ ಇಂಜಿನ್ ಸಾಮರ್ಥ್ಯ ಇರುವ ದ್ವಿಚಕ್ರ ವಾಹನವನ್ನು ಖರೀದಿಸಿದ್ದಾರೆ. ಹಾಗೂ ಆರ್‌ಟಿಓ ಕಚೇರಿಯಲ್ಲಿ ಹೊಸದಾಗಿ ನೋಂದಣಿಯಾಗುತ್ತಿವೆ. ಹೀಗಾಗಿ, ರಾಜ್ಯ ಸರಕಾರ ಹಿಂಬದಿ ಸವಾರರ ಪ್ರಯಾಣವನ್ನು ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿರುವ ಸುತ್ತೋಲೆಗೆ ಮಧ್ಯಂತರ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
  ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಸರಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿದೆ. ಸರಕಾರಿ ಪರ ವಕೀಲ ವಿ.ಶಿವಾರೆಡ್ಡಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News