ನ್ಯೂಯಾರ್ಕ್: ಭಯೋತ್ಪಾದಕ ದಾಳಿಗೆ ಎಂಟು ಬಲಿ

Update: 2017-11-01 16:16 GMT

ವಾಶಿಂಗ್ಟನ್, ನ. 1: ನ್ಯೂಯಾರ್ಕ್ ನಗರದ ಕೆಳ ಮ್ಯಾನ್‌ಹಟನ್ ಪ್ರದೇಶದಲ್ಲಿ ಸೈಕಲ್‌ಗಳ ಓಡಾಟಕ್ಕೆ ಮಾತ್ರ ಸೀಮಿತವಾಗಿರುವ ರಸ್ತೆಯೊಂದಕ್ಕೆ ಮಂಗಳವಾರ ತನ್ನ ‘ಪಿಕಪ್’ ಟ್ರಕ್ಕನ್ನು ನುಗ್ಗಿಸಿದ ವ್ಯಕ್ತಿಯೋರ್ವ ಎಂಟು ಮಂದಿಯನ್ನು ಹತ್ಯೆಗೈದಿದ್ದಾನೆ ಹಾಗೂ ದಾಳಿಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ.

2001 ಸೆಪ್ಟಂಬರ್ 11ರ ದಾಳಿಯ ಸಮೀಪವೇ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ.

  ತನ್ನ ವಾಹನವನ್ನು ಶಾಲಾ ಬಸ್ಸೊಂದಕ್ಕೆ ಢಿಕ್ಕಿ ಹೊಡೆಸಿದ ಬಳಿಕ ವಾಹನದಿಂದ ಹೊರಬಂದು ಎರಡು ಆಯುಧಗಳನ್ನು ಝಳಪಿಸುತ್ತಾ ನಡು ರಸ್ತೆಯಲ್ಲಿ ಸಾಗಿದ ದುಷ್ಕರ್ಮಿಯ ಹೊಟ್ಟೆಗೆ ಪೊಲೀಸ್ ಅಧಿಕಾರಿಯೊಬ್ಬರು ಗುಂಡು ಹಾರಿಸಿದರು.

ಬಳಿಕ ಪೊಲೀಸರು ಆತನನ್ನು ಬಂಧಿಸಿದರು. ಆತ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದುಷ್ಕರ್ಮಿಯನ್ನು ಫ್ಲೋರಿಡ ನಿವಾಸಿ 29 ವರ್ಷದ ಉಝ್ಬೆಕ್ ವಲಸಿಗ ಸೈಫುಲ್ಲ ಸೈಪೊವ್ ಎಂದು ಗುರುತಿಸಲಾಗಿದೆ. ಆತನಿಂದ ಒಂದು ಪೇಂಟ್ ಬಾಲ್ ಗನ್ ಮತ್ತು ಒಂದು ಪೆಲೆಟ್ ಗನ್ ವಶಪಡಿಸಿಕೊಳ್ಳಲಾಗಿದೆ.

‘‘ಇದು ಭಯೋತ್ಪಾದಕ ದಾಳಿಯಾಗಿದೆ. ಅದರಲ್ಲೂ ಮುಖ್ಯವಾಗಿ, ಅಮಾಯಕ ಹಾಗೂ ನಿರಾಯುಧ ನಾಗರಿಕರನ್ನು ಗುರಿಯಾಗಿಸಿ ನಡೆಸಲಾದ ಹೇಡಿತನದ ಭಯೋತ್ಪಾದಕ ದಾಳಿಯಾಗಿದೆ’’ ಎಂದು ಮೇಯರ್ ಬಿಲ್ ಡಿ ಬ್ಲಾಸಿಯೊ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯ ದಾರಿಯಲ್ಲಿ ಮೃತಪಟ್ಟರು. ಮೃತಪಟ್ಟವರಲ್ಲಿ ಅರ್ಜೆಂಟೀನದ ಆರು ಮಂದಿ ಸ್ನೇಹಿತರು ಸೇರಿದ್ದಾರೆ.

9/11 ಭಯೋತ್ಪಾದಕ ದಾಳಿ ನಡೆದ ಬಳಿಕ ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿರುವ ಪ್ರಥಮ ಪ್ರಮುಖ ಭಯೋತ್ಪಾದಕ ದಾಳಿ ಇದಾಗಿದೆ. 9/11ರ ದಾಳಿಯಲ್ಲಿ 2,606 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಅದರಲ್ಲಿ 34 ಭಾರತೀಯರೂ ಸೇರಿದ್ದಾರೆ.

ಈ ದಾಳಿಯು 9/11 ಸ್ಮಾರಕದಿಂದ ಕೆಲವೇ ಬ್ಲಾಕ್‌ಗಳ ಅಂತರದಲ್ಲಿ ಸಂಭವಿಸಿದೆ.

ಗಾಯಗೊಂಡವರಲ್ಲಿ ಭಾರತೀಯರಿಲ್ಲ

ನ್ಯೂಯಾರ್ಕ್ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಯಾವುದೇ ಭಾರತೀಯರು ಗಾಯಗೊಂಡಿಲ್ಲ ಎಂದು ಭಾರತೀಯ ಕಾನ್ಸುಲೇಟ್ ಜನರಲ್ ಬುಧವಾರ ಹೇಳಿದ್ದಾರೆ.

‘‘ಮೃತಪಟ್ಟವರಲ್ಲಿ ಅಥವಾ ಗಾಯಗೊಂಡವರಲ್ಲಿ ಯಾವುದೇ ಭಾರತೀಯರ ಹೆಸರಿಲ್ಲ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ’’ ಎಂದು ಕಾನ್ಸುಲೇಟ್ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News