ರಾಹುಲ್ ಗಾಂಧಿಯಿಂದ ನನ್ನ ಪುತ್ರ ಇಂದು ಪೈಲಟ್ ಆಗಿದ್ದಾನೆ, ಅವರಿಗೆ ಧನ್ಯವಾದಗಳು: ನಿರ್ಭಯಾ ತಾಯಿ

Update: 2017-11-02 07:19 GMT

ಹೊಸದಿಲ್ಲಿ,ನ.2 :  ರಾಜಧಾನಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣ ಇಡೀ ದೇಶವನ್ನೇ ದಂಗಾಗಿಸಿತ್ತು. ತಮ್ಮ ಮಗಳನ್ನು ಕಳೆದುಕೊಂಡ ನಿರ್ಭಯಾ ಹೆತ್ತವರು ಕಂಗಾಲಾಗಿ ದುಃಖದ ಮಡುವಿನಲ್ಲಿ ಮುಳುಗಿದ್ದರು. ಈ ಕರಾಳ ಘಟನೆ ನಡೆದು ಐದು ವರ್ಷಗಳಾಗಿವೆ. ಈಗ ನಿರ್ಭಯಾಳ ಸಹೋದರ ವಿಮಾನ ಹಾರಾಟಕ್ಕೆ ಸಜ್ಜಾಗಿದ್ದಾನೆ. ಇದು ಸಾಧ್ಯವಾದುದಕ್ಕೆ ನಿರ್ಭಯಾಳ ತಾಯಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

                                    (ಆಶಾ ದೇವಿ)

"ಅಮನ್ (ಹೆಸರು ಬದಲಾಯಿಸಲಾಗಿದೆ) ಇದೀಗ ರಾಹುಲ್ ಗಾಂಧಿ ಅವರಿಂದಾಗಿ ಪೈಲಟ್ ಆಗಿದ್ದಾನೆ,'' ಎಂದು ಆಶಾ ದೇವಿ ಹೇಳುತ್ತಾರೆ. ತನ್ನ ಅಕ್ಕನ ದಾರುಣ ಅಂತ್ಯದಿಂದ ಅಮನ್ ಕಂಗೆಟ್ಟಿದ್ದರೂ ಆಗ 12ನೇ ತರಗತಿಯಲ್ಲಿ ಕಲಿಯುತ್ತಿದ್ದ ಆತನಿಗೆ ರಾಹುಲ್ ಅವರೇ ಸ್ಫೂರ್ತಿಯ ಚಿಲುಮೆಯಾಗಿದ್ದರು ಎಂದು ಆಶಾ ನೆನಪಿಸುತ್ತಾರೆ. 

ಆತನ ಉನ್ನತಾಭ್ಯಾಸಕ್ಕೆ ಸಹಾಯ ಮಾಡಿ ರಾಹುಲ್ ಆಗಾಗ ಆತನಿಗೆ ಫೋನ್ ಕರೆ ಮಾಡಿ ಆತನನ್ನು ಉತ್ತೇಜಿಸುತ್ತಿದ್ದರು. ಆತನಿಗೆ ಮಿಲಿಟರಿ ಸೇರಬೇಕೆಂಬ ಕನಸು ಇರುವುದನ್ನು ಅರಿತ ರಾಹುಲ್ ಆತನನ್ನು ಪೈಲಟ್  ತರಬೇತಿಗೆ ಸೇರುವಂತೆ ಪ್ರೇರೇಪಿಸಿದರು,'' ಎಂದು ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಲು ಹೋರಾಡಿದ್ದ ಆಶಾದೇವಿ ತಮ್ಮ ಮಗನ ಕುರಿತಾಗಿ ಹೇಳಿದರು.

2013ರಲ್ಲಿ ಸಿಬಿಎಸ್‍ಇ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ ಅಮನ್ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ, ರಾಯ್ ಬರೇಲಿಯಲ್ಲಿ ಪ್ರವೇಶ ಪಡೆದಿದ್ದ. "ಅಮನ್ ತನ್ನ ತರಬೇತಿ ಪೂರ್ತಿಗೊಳಿಸಿದ ನಂತರವೂ ರಾಹುಲ್ ಆತನ ಜತೆ ಮಾತನಾಡಿದ್ದಾರೆ,'' ಎಂದ ಆಶಾದೇವಿ ಈಗ ಆತ ಗುರುಗ್ರಾಮದಲ್ಲಿ ವಾಣಿಜ್ಯ ವಿಮಾನಯಾನ ಸಂಸ್ಥೆಯೊಂದರಲ್ಲಿ ಅಂತಿಮ ತರಬೇತು ಪಡೆಯುತ್ತಿದ್ದಾನೆ. ಪ್ರಿಯಾಂಕ ಗಾಂಧಿ ಕೂಡ ಆಗಾಗ ನಮ್ಮ ಜತೆ ದೂರವಾಣಿಯಲ್ಲಿ ಮಾತನಾಡುತ್ತಾರೆ,'' ಎಂದರು.

ನಿರ್ಭಯಾಳ ಕಿರಿಯ ಸೋದರ ಪುಣೆಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾನೆ. ನಿರ್ಭಯಾಳ ತಂದೆ  ದಿಲ್ಲಿ ವಿಮಾನ ನಿಲ್ದಾಣದ 3ನೇ ಟರ್ಮಿನಲ್ ನಲ್ಲಿ  ಉದ್ಯೋಗಿಯಾಗಿದ್ದಾರೆ.ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ನಾಲ್ಕು ಮಂದಿಯನ್ನು ಇನ್ನೂ ಏಕೆ ಗಲ್ಲಿಗೇರಿಸಲಾಗಿಲ್ಲ ಎಂದು ಆಶಾದೇವಿ ದಿಲ್ಲಿ ಮಹಿಳಾ ಆಯೋಗಕ್ಕೆ ದೂರಿದ್ದ ಹಿನ್ನೆಲೆಯಲ್ಲಿ  ಬುಧವಾರ ಆಯೋಗ ಈ ಬಗ್ಗೆ  ತಿಹಾರ ಜೈಲಿನ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News