×
Ad

ನ.7ರಿಂದ ‘ಕರ್ನಾಟಕ ವಿಕಾಸ ವಾಹಿನಿ’ರ್ಯಾಲಿ: ಕುಮಾರಸ್ವಾಮಿ

Update: 2017-11-03 21:56 IST

ಬೆಂಗಳೂರು, ನ. 3: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನ.7ರಿಂದ ಮೈಸೂರಿನಿಂದ ‘ಕರ್ನಾಟಕ ವಿಕಾಸ ವಾಹಿನಿ’ ರ್ಯಾಲಿ ನಡೆಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಅನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದ ಮೊದಲ ಸಭೆ ನಡೆಸಲಾಗುವುದು. ಶಾಸಕ ಚಿಕ್ಕಮಾದು ನಿಧನದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಮಾವೇಶವನ್ನು ಮುಂದೂಡಲಾಗಿದೆ ಎಂದರು.

ಪಕ್ಷದ ಪ್ರಚಾರಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ‘ಕರ್ನಾಟಕ ವಿಕಾಸ ವಾಹಿನಿ’ ಬಸ್ ಚಾಮುಂಡೇಶ್ವರಿ ಕ್ಷೇತ್ರದಿಂದ ಕೆ.ಆರ್.ನಗರ, ಹಾಸನ, ಬೇಲೂರು ಮೂಲಕ ಚಿಕ್ಕಮಗಳೂರಿಗೆ ತೆರಳಲಿದ್ದು, ಅಂದು ಸಂಜೆ ಕಾರ್ಯಕರ್ತರ ಸಭೆಯಲ್ಲಿ ನಡೆಸಲಾಗುವುದು. ರಾತ್ರಿ ಚಿಕ್ಕಮಗಳೂರಿನ ಗ್ರಾಮವೊಂದರಲ್ಲಿ ವಾಸ್ತವ್ಯ ಮಾಡಲಾಗುವುದು. ನ.8ಕ್ಕೆ ತರಿಕೆರೆಯಲ್ಲಿ ಬಹಿರಂಗ ಸಭೆ, ಅದೇ ದಿನ ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಶಾಸಕ ಮಧುಬಂಗಾರಪ್ಪ ನೇತೃತ್ವದಲ್ಲಿ ಕೈಗೊಂಡಿರುವ ಪಾದಯಾತ್ರೆ ಮುಕ್ತಾಯ ಸಮಾರಂಭ ಮತ್ತು ಬೃಹತ್ ಸಮಾವೇಶದಲ್ಲಿ ಭಾಗವಹಿುವುದು ಎಂದು ಮಾಹಿತಿ ನೀಡಿದರು.

ಆ ದಿನ ರಾತ್ರಿ ಶಿವಮೊಗ್ಗ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗ್ರಾಮವೊಂದರಲ್ಲಿ ವಾಸ್ತವ್ಯ ಹೂಡಲಾಗುವುದು. ನ.9ರಂದು ಬೆಳಗ್ಗೆ ಚನ್ನಗಿರಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಸಂಜೆ ಹರಿಹರ ಕ್ಷೇತ್ರದಲ್ಲಿ ಆಯೋಜಿಸುವ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಎಂದರು.

ರೈತರ ಸಮಾವೇಶ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನ.13ರಂದು ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದ ದಿನವೇ ಜೆಡಿಎಸ್‌ನಿಂದ ರೈತ ಸಮಾವೇಶ ನಡೆಯಲಿದ್ದು, ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಬೈಕ್ ರ್ಯಾಲಿ: ನ.7ರಿಂದ ರಾಯಚೂರುನಿಂದ ಬಾಗಲಕೋಟೆ, ವಿಜಯಪುರ ಮಾರ್ಗವಾಗಿ ಬೆಳಗಾವಿವರೆಗೆ ಜೆಡಿಎಸ್ ಕಾರ್ಯಕರ್ತರ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಅಧಿವೇಶನದ ಬಳಿಕ ನ.25ರ ನಂತರ ಉತ್ತರ ಕರ್ನಾಟಕ ಭಾಗದ 50 ಕ್ಷೇತ್ರಗಳಲ್ಲಿ ಪ್ರವಾಸ-ಗ್ರಾಮ ವಾಸ್ತವ್ಯ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನ.4ರಂದು ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News