×
Ad

ಶಿವಮೊಗ್ಗ: ನಿಯಂತ್ರಣ ಕಾಯ್ದೆ ವಿರೋಧಿಸಿ ಖಾಸಗಿ ಆಸ್ಪತ್ರೆ ವೆದ್ಯರ ಪ್ರತಿಭಟನೆ

Update: 2017-11-03 23:14 IST

ಶಿವಮೊಗ್ಗ, ನ.3: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ)ಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮ ವಿರೋಧಿಸಿ ಭಾರತೀಯ ವೈದ್ಯಕೀಯ ಮಂಡಳಿ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಖಾಸಗಿ ಆಸ್ಪತ್ರೆ ವೈದ್ಯ-ಸಿಬ್ಬಂದಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿತು. ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ನಂತರ ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಕೆಪಿಎಂಇ ಕಾಯ್ದೆ ತಿದ್ದುಪಡಿಗಾಗಿ ರಚಿಸಿದ್ದ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಸಮಿತಿಯ ವರದಿಯನ್ನು ರಾಜ್ಯ ಸರಕಾರ ಯಥಾವತ್ತಾಗಿ ಅಳವಡಿಸಿಕೊಳ್ಳಬೇಕೆಂದು ಐಎಂಎ ಹಲವು ಬಾರಿ ಮನವಿ ಸಲ್ಲಿಸಿದೆ. ಆದರೆ ಆರೋಗ್ಯ ಸಚಿವರು ಇದನ್ನು ಪರಿಗಣಿಸದೆ ತಮ್ಮ ಹಠಮಾರಿ ಧೋರಣೆ ಮುಂದುವರಿಸಿದ್ದಾರೆ. ಈ ಮೂಲಕ ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಈ ಕಾಯ್ದೆಯನ್ನು ಜಾರಿಗೆ ತರುವುದರಿಂದ ಸಾಕಷ್ಟು ಅನಾಹುತಗಳು ಸಂಭವಿಸಲಿದೆ. ಪೂರ್ವಾಗ್ರಹಪೀಡಿತ ಈ ವರದಿಯಿಂದ ಆಸ್ಪತ್ರೆ, ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದರಲ್ಲಿರುವ ಜಿಲ್ಲಾಮಟ್ಟದ ಕುಂದು-ಕೊರತೆ ಪರಿಹಾರ ಸಮಿತಿ ರಚಿಸುವ ನಿರ್ಧಾರವನ್ನು ಕೈಬಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ರಾಜ್ಯಮಟ್ಟದಲ್ಲಿ ಇಂತಹ ಸಂಸ್ಥೆ ಇರುವಾಗ ಮತ್ತು ತಪ್ಪಿತಸ್ಥ ವೈದ್ಯಕೀಯ ಸಂಸ್ಥೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದೆ. ಗ್ರಾಹಕ ನ್ಯಾಯಾಲಯದಲ್ಲೂ ಪ್ರಕರಣ ದಾಖಲಿಸಬಹುದು ಎಂದರು.

ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಸಮಿತಿ ರಚಿಸಿದರೆ ವೈದ್ಯರು ತಮ್ಮ ಕೆಲಸ ಬಿಟ್ಟು ನ್ಯಾಯಾಲಯಕ್ಕೆ ಅಲೆಯಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಐಎಂಎ ಜಿಲ್ಲಾಧ್ಯಕ್ಷ ಆರ್.ಬಿ. ಪುರುಷೋತ್ತಮ, ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಮಲ್ಲೇಶ್ ಹುಲ್ಲಮನಿ, ಐಎಂಎ ಗೌರವ ಕಾರ್ಯದರ್ಶಿ ಕೆ.ಆರ್. ರವೀಶ್, ಉಪಾಧ್ಯಕ್ಷ ಪಿ.ಕೆ. ಪೈ, ಎಚ್.ಎಲ್. ಮಹೇಂದ್ರ, ಎಂ.ಎಲ್. ಮಂಜುನಾಥ, ರಾಜೇಶ್ ಪೈ, ಎನ್. ಪ್ರಕಾಶ್, ವಾಣಿ ಕೋರಿ, ವೆಂಕಟ್‌ರಾವ್, ರೂಪಾ ರಾವ್, ಉದಯ್‌ರಾವ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News