ಕಾಶ್ಮೀರ ಪತ್ರಿಕೆಗಳ ಮೇಲೆ ಕೇಂದ್ರ ಮತ್ತೊಂದು ಅಸ್ತ್ರ

Update: 2017-11-04 03:52 GMT

ಕಾಶ್ಮೀರ, ನ.4: ಯಾವುದೇ ಪತ್ರಿಕೆಗಳು "ರಾಷ್ಟ್ರವಿರೋಧಿ ಲೇಖನ"ಗಳನ್ನು ಪ್ರಕಟಿಸುವುದು ಗಮನಕ್ಕೆ ಬಂದರೆ ತಕ್ಷಣ ಅಂಥ ಪತ್ರಿಕೆಗಳಿಗೆ ಜಾಹೀರಾತು ನೀಡುವುದು ಸ್ಥಗಿತಗೊಳಿಸಿ ಎಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸೂಚನೆ ನೀಡಿದೆ.

ಯಾವುದೇ ಪತ್ರಿಕೆಯ ಹೆಸರನ್ನು ಉಲ್ಲೇಖಿಸದೇ, ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರಕ್ಕೆ ಈ ಸೂಚನೆ ನೀಡಿದ್ದು, ಕೆಲ ಪತ್ರಿಕೆಗಳು ಭಯೋತ್ಪಾದಕರನ್ನು ಹಾಗೂ ರಾಷ್ಟ್ರವಿರೋಧಿ ಶಕ್ತಿಗಳನ್ನು ವೈಭವೀಕರಿಸುವ, ದೇಶದ ಬಗ್ಗೆ ನಿಂದನಾತ್ಮಕ ಲೇಖನಗಳನ್ನು ಪ್ರಕಟಿಸುತ್ತಿವೆ ಎಂದು ಹೇಳಿದೆ.
ಇಂಥ ಪತ್ರಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮೆಹಬೂಬಾ ಮುಫ್ತಿ ಸರ್ಕಾರಕ್ಕೆ ಸೂಚಿಸಿದೆ.

2017ರ ಅಕ್ಟೋಬರ್ 18ರಂದು ಈ ಪತ್ರ ಬರೆಯಲಾಗಿದ್ದು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇದರ ಪ್ರಕಾರ, "ಜಮ್ಮು ಮತ್ತು ಕಾಶ್ಮೀರದಿಂದ ಪ್ರಕಟವಾಗುವ ಕೆಲ ಪತ್ರಿಕೆಗಳು ಹಲವು ನಿಂದನಾತ್ಮಕ ಹಾಗೂ ಭಯೋತ್ಪಾದಕರು ಮತ್ತು ರಾಷ್ಟ್ರವಿರೋಧಿ ಶಕ್ತಿಗಳನ್ನು ವೈಭವೀಕರಿಸುವ ಲೇಖನಗಳನ್ನು ಪ್ರಕಟಿಸುತ್ತಿವೆ ಎಂದು ತಿಳಿದುಬಂದಿದೆ. ಇದು ಭಾರತ ಸಂವಿಧಾನ ಮತ್ತು ಜಮ್ಮು ಕಾಶ್ಮೀರ ಸಂವಿಧಾನಕ್ಕೆ ವಿರೋಧವಾದದ್ದು" ಎಂದು ವಿವರಿಸಲಾಗಿದೆ. ಈ ಪತ್ರದ ಪ್ರತಿ ಹಿಂದೂಸ್ತಾನ್ ಟೈಮ್ಸ್‌ಗೆ ಲಭ್ಯವಾಗಿದೆ.

"ಇಂಥ ಪತ್ರಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಜಾಹೀರಾತು ಸ್ಥಗಿತಗೊಳಿಸುವ ಮೂಲಕ ಅವುಗಳ ಪೋಷಣೆ ನಿಲ್ಲಿಸಬೇಕು. ಸಂಬಂಧಪಟ್ಟ ಎಲ್ಲರಿಗೂ ಇದನ್ನು ರವಾನಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು" ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News