ಮಾಟ ಮಂತ್ರಗಳೆಂಬ ಮೌಢ್ಯತೆ...

Update: 2017-11-04 12:38 GMT

ಭಾಗ 19

ಈಮಾಟ ಮಂತ್ರಗಳು ಕೂಡಾ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಆಳ ವಾಗಿ ಬೇರೂರಿರುವ ವೌಢ್ಯಗಳು. ಈ ಮಾಟ ಮಂತ್ರಗಳ ಪ್ರಖರತೆ ಅದೆಷ್ಟು ಇರುತ್ತದೆಯೆಂದರೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿ, ಮನುಷ್ಯ ಸಾಯುವ ಹಂತಕ್ಕೂ ತಲುಪುತ್ತಾನಂತೆ, ಹಾಗೊಂದು ನಂಬಿಕೆ ನಮ್ಮ ಜನರ ನಡುವೆ ಇದೆ. ಇಷ್ಟು ಮಾತ್ರ ಅಲ್ಲ, ಈ ಮಾಟ ಮಂತ್ರಗಳನ್ನು ತೆಗೆಸುವುದಕ್ಕಾಗಿಯೇ ಮಂತ್ರವಾದಿ ಗಳೂ ಇರುತ್ತಾರೆ. ಯಾರೋ ಮಾಡಿದ ಮಾಟ ಅಥವಾ ಮಂತ್ರವನ್ನು ಈ ಮಂತ್ರವಾದಿಗಳೆನಿಸಿಕೊಳ್ಳುವವರು ಅದನ್ನು ತೆಗೆಯುವುದು ಮಾತ್ರವಲ್ಲದೆ, ಮತ್ತೆಂದೂ ಅವರನ್ನು ಬಾಧಿಸದಂತೆ ರಕ್ಷಣೆಯನ್ನೂ ಒದಗಿಸುತ್ತಾರೆಂಬುದು ಮುಗ್ಧರ ನಂಬಿಕೆ.

ಅಂದ ಹಾಗೆ, ಈ ಮಾಟ ಮಂತ್ರಗಳನ್ನು ಮಾಡುವ ವರ ಬಗ್ಗೆ ಸಾಕಷ್ಟು ಸ್ವಾರಸ್ಯಕರ ಸಂಗತಿಗಳನ್ನು ನಮ್ಮ ತಂಡವು ಪವಾಡ ರಹಸ್ಯ ಬಯಲಿನ ವೇಳೆ ಕಂಡುಕೊಂಡಿ ದ್ದೇವೆ. ನಮ್ಮ ಜಿಲ್ಲೆಯಲ್ಲಿ ನೆರೆ ರಾಜ್ಯದ ಪವರ್‌ಫುಲ್ ಮಂತ್ರವಾದಿಗಳೂ ಇದ್ದಾರೆ. ಇದರಿಂದಾಗಿ ಆರಂಭದಲ್ಲಿ ನಮ್ಮ ನೆರೆಯ ರಾಜ್ಯದಲ್ಲಿ ಮನೆ ಮನೆಗಳಲ್ಲೂ ಈ ಮಂತ್ರವಾದಿಗಳು ಇರಬಹುದೆಂಬುದು ನನ್ನ ಶಂಕೆಯಾಗಿತ್ತು. ಆದರೆ ವಿಚಿತ್ರವೆಂದರೆ ನಮ್ಮದೇ ನೆರೆಯ ರಾಜ್ಯದಲ್ಲಿ ಇದೇ ದಕ್ಷಿಣ ಕನ್ನಡ ಜಿಲ್ಲೆಯ ಮಂತ್ರವಾದಿಗಳು ಸುಪ್ರಸಿದ್ಧರು. ಎತ್ತಂಣದಿಂದೆತ್ತ ಸಂಬಂಧವಯ್ಯಿ ಇದು ಎನ್ನಲೇಬೇಕಲ್ಲವೇ?

ಈ ಮಂತ್ರವಾದಿಗಳೆಂದು ಕರೆಸಿಕೊಳ್ಳುವವರಿಗೆ ಯಾರು ಆ ಮಾಟ ಮಂತ್ರವನ್ನು ಮಾಡಿರುತ್ತಾರೆ ಎಂಬ ಬಗ್ಗೆ ನಿರ್ದಿಷ್ಟವಾಗಿ ತಿಳಿದಿರುವುದಿಲ್ಲ. ಆದರೆ ಮಾಡಿಸಿದ ಮಂತ್ರವನ್ನು ಮಾತ್ರ ಇವರು ತೆಗೆಸಬಲ್ಲರು!

ಇದಕ್ಕಾಗಿಯೇ ಈ ಮಂತ್ರವಾದಿಗಳಿಗೆ ನಾನೂ ಒಂದು ಸವಾಲು ಹಾಕಿದ್ದೆ. ‘‘ಮಾಟ ಮಂತ್ರಗಳ ಶಕ್ತಿ ಇರುವವರು ತಮ್ಮ ಆ ಶಕ್ತಿಯನ್ನು ಪ್ರಯೋ ಗಿಸಿ ನನ್ನನ್ನು ಕೊಲ್ಲಬೇಕು’’ ಎಂಬ ಸವಾಲನ್ನ ಸುಮಾರು 10 ವರ್ಷಗಳ ಹಿಂದೆಯೇ ನಾನು ಹಾಕಿದ್ದೆ. ಮಾತ್ರವಲ್ಲದೆ ಈ ಸವಾಲನ್ನು ಎದುರಿಸುವ ಮಂತ್ರವಾದಿಗಳು ಒಂದು ವಾರದ ಮೊದಲೇ ನಾನು ಯಾವ ಹೊತ್ತಿ ನಲ್ಲಿ ಸಾಯುತ್ತೇನೆಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು! ಇಲ್ಲವಾದಲ್ಲಿ ನಾನೇನಾದರೂ ಆಕಸ್ಮತ್ತಾಗಿ ಅಥವಾ ನನ್ನ ಆರೋಗ್ಯದ ಕಾರಣದಿಂದ ಸತ್ತರೆ ಅದಕ್ಕೆ ತಾವೇ ಕಾರಣ ಎಂದು ಈ ಸವಾಲು ಸ್ವೀಕರಿಸಿದವರು ಕೊಚ್ಚಿಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು ಅಲ್ಲವೇ?!

ಈ ಮಾಟ ಮಂತ್ರಕ್ಕಾಗಿ ಉಪಯೋಗಿಸುವ ವಸ್ತುಗಳಲ್ಲೂ ಹಲವು ಇವೆ. ಅವುಗಳಲ್ಲಿ ಪ್ರಮುಖವಾದುದು ಲಿಂಬೆಹಣ್ಣು, ಕುಂಕುಮ. ಇದರ ಜತೆಗೆ ಮೂಕ ಜೀವಿಗಳಾದ ಕಪ್ಪೆ, ಆಮೆಗಳೂ ಸೇರಿವೆ. ಈ ಮೂಕ ಪ್ರಾಣಿಗಳು ಮನೆಯೊಳಕ್ಕೆ ಬಂದಿವೆ ಎಂದರೆ ಯಾರಾದರೂ ಮಾಟ ಮಾಡಿಸಿದ್ದಾರೆಂಬ ಅಳುಕು ಇಂದಿಗೂ ನಮ್ಮ ಸಮಾಜದಲ್ಲಿ ಕಾಣಸಿಗುತ್ತದೆ.

ಮಾಟದ ಲಿಂಬೆ ಹಣ್ಣು!

ಇದು ನನ್ನ ಲೇಖಕ ಮಿತ್ರ ಫಕೀರ್ ಮುಹ ಮ್ಮದ್ ಕಟ್ಪಾಡಿಯವರು ತಿಳಿಸಿದ ಘಟನೆ. ನನ್ನ ಮಿತ್ರರ ತಂದೆ ಒಂದು ದಿನ ಉಪ್ಪಿನಕಾಯಿ ಹಾಕ ಲೆಂದು ಸುಮಾರು 20ರಷ್ಟು ಲಿಂಬೆಹಣ್ಣು ಖರೀದಿಸಿ ತಂದಿದ್ದರು. ಹಿಂದೆಲ್ಲಾ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾ ಗುತ್ತಿರಲಿಲ್ಲ. ಬದಲಾಗಿ ತಮ್ಮಲ್ಲಿದ್ದ ಬಟ್ಟೆಯ ವಸ್ತ್ರಗಳಲ್ಲೇ ವಸ್ತುಗಳನ್ನು ತರಲಾಗುತ್ತಿತ್ತು. ನನ್ನ ಮಿತ್ರರ ತಂದೆಯೂ ಲಿಂಬೆ ಹಣ್ಣುಗಳನ್ನು ತಮ್ಮ ಕರವಸ್ತ್ರದಲ್ಲಿ ಸುತ್ತಿ ತಂದಿದ್ದರು. ರಾತ್ರಿ ಹೊತ್ತು ಇವರು ತಮ್ಮ ಮನೆಗೆ ಹಿಂದಿರುಗುತ್ತಿದ್ದರು. ಇವರ ಕೈಯಲ್ಲಿ ದೀಪವಿರಲಿಲ್ಲ. ಗದ್ದೆ ಬದಿಯಲ್ಲಿ ನಡೆದುಕೊಂಡು ಬರು ವಾಗ ದಾರಿಯಲ್ಲಿ ಕಾಲುಜಾರಿ ಬಿದ್ದುಬಿಟ್ಟರು. ಕೆಳಗೆ ಬಿದ್ದಾಗ ಕೈಯಲ್ಲಿದ್ದ ಲಿಂಬೆ ಹಣ್ಣಿನ್ನು ಸುತ್ತಿದ್ದ ಕರವಸ್ತ್ರವೂ ಕೈಜಾರಿತ್ತು. ಬಿದ್ದ ಲಿಂಬೆ ಹಣ್ಣು ಗಳನ್ನು ಕತ್ತಲಿನಲ್ಲಿ ತಡಕಾಡಿ ಒಟ್ಟು ಮಾಡಿ ಮನೆ ಸೇರಿದ್ದರು.

ಮರುದಿನ ಬೆಳಗ್ಗೆ ಎದ್ದಾಗ ಪಕ್ಕದ ಎರಡು ಮನೆಗಳವರ ನಡುವೆ ಜಗಳ ನಡೆಯುತ್ತಿತ್ತು. ಪರಸ್ಪರ ಒಬ್ಬರಿಗೊಬ್ಬರು ದೂಷಣೆ ಮಾಡಿಕೊಳ್ಳುತ್ತಿದ್ದರಂತೆ. ನನಗೆ ನೀನು ಮಾಟ ಮಾಡಿದ್ದಿ ಎಂದು ಒಂದು ನೆರೆಮನೆಯವರ ಆರೋಪವಾದರೆ, ಮತ್ತೊಬ್ಬನೂ ಅದನ್ನೇ ಇನ್ನೊಬ್ಬನಿಗೆ ಹೇಳುತ್ತಿದ್ದ. ಅದಾಗಲೇ ನನ್ನ ಮಿತ್ರನ ತಂದೆ ಎದ್ದು ಬಂದು ನಡೆದ ವಿಷಯವನ್ನು ತಿಳಿಸಿದರು. ರಾತ್ರಿ ಬರುವಾಗ ತನ್ನ ಕೈಯಲ್ಲಿದ್ದ ನಿಂಬೆ ಹಣ್ಣು ಗಳು ಕೈಚೆಲ್ಲಿ ಹೋದ ಬಗ್ಗೆ, ಅದರಲ್ಲಿ ಆ ನಿಂಬೆ ಹಣ್ಣು ಬಾಕಿಯಾಗಿರಬೇಕು ಎಂದು ಹೇಳಿದರೂ ಆ ಎರಡು ಮನೆಯವರೂ ಮಾತ್ರ ಒಪ್ಪುವ ಮನಸ್ಥಿತಿಯಲ್ಲಿರಲಿಲ್ಲ. ತಮ್ಮ ಜಗಳವನ್ನು ತಪ್ಪಿಸಲು ಈ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆಂಬುದು ಅವರಿಬ್ಬರ ಅನಿಸಿಕೆಯಾಗಿತ್ತು. ಒಟ್ಟಿನಲ್ಲಿ ಮಾಟ ಎಂಬ ಅಪನಂಬಿಕೆ ವಿಕೋಪಕ್ಕೆ ತಿರುಗಿ ಎರಡು ಮನೆಗಳ ನಡುವಿನ ಸಂಬಂಧವನ್ನು ಕಳಚಿಹಾಕಿತ್ತು.

ಮಾಟ ಮಾಡಿದ ವೈದ್ಯರು!

ಮಾಟ ಮಂತ್ರದ ಬಗ್ಗೆ ಜನರಲ್ಲಿ ಅದೆಷ್ಟು ಗಾಢವಾದ ವೌಢ್ಯ ಬೇರೂರಿ ರುತ್ತದೆ ಎಂದರೆ, ವೈದ್ಯರಾಗಿರುವರೂ ಕೆಲವೊಮ್ಮೆ ಮಾಟ ಮಂತ್ರಗಳನ್ನು ನಂಬುವವರಾಗಿ ಬಿಡುತ್ತಾರೆ!

ಅದೊಂದು ದಿನ ನನ್ನ ಬಾಲ್ಯ ಸ್ನೇಹಿತ ತುರ್ತಾಗಿ ಮಾತನಾಡ ಬೇಕೆಂದುನನ್ನ ಬಳಿ ಬಂದಿದ್ದ. ತನ್ನ ಅಣ್ಣನಿಗೆ ಸಹದ್ಯೋಗಿ ವೈದ್ಯನೊಬ್ಬ ಮಾಟ ಮಾಡಿದ್ದಾನೆಂಬುದು ಆತನ ಆರೋಪವಾಗಿತ್ತು.

ಆ ಅಣ್ಣ ತಮ್ಮಂದಿರಿಬ್ಬರೂ ನನ್ನ ಬಾಲ್ಯ ಸ್ನೇಹಿತರು. ಅಣ್ಣ ಪ್ರಸೂತಿ- ಸ್ತ್ರೀರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಾತ. ತಮ್ಮ ಎಂಬಿಬಿಎಸ್ ಮುಗಿಸಿ ವಿದೇಶದಲ್ಲಿದ್ದ. ಅಣ್ಣ ತೊಂದರೆಯಲ್ಲಿರುವ ಕಾರಣ ತಿಳಿದು ಆತನಿಗೆ ಸಹಾಯ ಮಾಡಲು ಅಲ್ಲಿಂದ ತಮ್ಮ ವಿದೇಶದಿಂದ ಆಗಮಿಸಿದ್ದ.

ವೈದ್ಯನಾಗಿದ್ದ ನ್ನ ಸ್ನೇಹಿತ ಮತ್ತು ಅವರ ಮಿತ್ರರೇ ಆದ ಇನ್ನೋರ್ವ ವೈದ್ಯರು ಒಂದೇ ನರ್ಸಿಂಗ್ ಹೋಂನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ನನ್ನ ಸ್ನೇಹಿತನಿಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುವುದನ್ನು ಕಂಡ ಇನ್ನೊಬ್ಬ ವೈದ್ಯ ಮಾಟ ಮಾಡಿಸಿದ್ದನಂತೆ. ಈ ಮಾಟದಿಂದಾಗಿ ನನ್ನ ಸ್ನೇಹಿತ ತೊಂದರೆ ಅನುಭವಿಸಬೇಕಾಯಿತಂತೆ. ಕೊನೆಗೆ ಆತ ಊರೇ ಬಿಟ್ಟು ಹೋದನಂತೆ. ಮಾಟ ಮಾಡಿದ್ದಾರೆಂಬುದನ್ನು ಹೇಗೆ ಹೇಳುತ್ತಿ ಎಂದು ನನ್ನಲ್ಲಿಗೆ ಬಂದ ಸ್ನೇಹಿತನನ್ನು ಕೇಳಿದಾಗ, ನಾನು ಈ ಬಗ್ಗೆ ಹಲವಾರು ಸ್ವಾಮೀಜಿಗಳಲ್ಲಿ ವಿಚಾರಿಸಿದ್ದೇನೆ. ಆತನ ಜಾತಕವನ್ನೂ ತೋರಿಸಿದ್ದಾನೆ ಎಂಬ ಉತ್ತರ ಸಿಕ್ಕಿತ್ತು!

 ಈ ಬಗ್ಗೆ ಆ ಇನ್ನೊಬ್ಬ ವೈದ್ಯನಲ್ಲಿಯೂ ವಿಚಾರಿಸಲಾಯಿತು. ಆದರೆ ಆತ ಇದನ್ನು ನಿರಾಕರಿಸಿದ್ದಲ್ಲದೆ, ಈ ಬಗ್ಗೆ ತಾನೂ ಪ್ರಮಾಣಕ್ಕೂ ಸಿದ್ಧ ಎಂದು ಸ್ಪಷ್ಟಪಡಿಸಿದ್ದರು. ಒಟ್ಟಿನಲ್ಲಿ ಪರಮಾಪ್ತರಾಗಿದ್ದ, ವೈದ್ಯರಾಗಿದ್ದ ಮಿತ್ರರಿಬ್ಬರು ವೈರಿಗಳಾಗಿ ಅವರಿಬ್ಬರ ನಡುವೆ ಸಂಬಂಧವೇ ಹಳಸಿ ಹೋಯಿತು.

ಮಾಟ ತೆಗೆಯುವುದೆಂದರೆ ಸುಲಭವಲ್ಲ!

ಹೌದು, ಒಬ್ಬರಿಗೆ ಯಾರಾದರೂ ಮಾಟ ಮಾಡಿಸಿದ್ದಾರೆಂದರೆ ಅದನ್ನು ತೆಗೆಯುವುದು ಸುಲಭದ ಕೆಲಸವಲ್ಲ. ತೆಗೆಸುವವನ ಪ್ರಾಣಕ್ಕೂ ಅಪಾಯ ಸಂಭವಿಸಬಹುದು. ಅದಕ್ಕಾಗಿ ಮಾಟ ತೆಗೆಸಲು ಬಯಸುವವ ಸಾಕಷ್ಟು ಖರ್ಚು ವೆಚ್ಚ ಮಾಡಲೇಬೇಕು!

ನನ್ನ ಪರಿಚಯದ ಮಹಿಳೆಯೊಬ್ಬರು ಮಾಟಕ್ಕೆ ತುತ್ತಾಗಿ ಅದನ್ನು ಹೇಗೆ ತೆಗೆಸಿಕೊಂಡೆ ಎಂಬುದನ್ನು ನನ್ನಲ್ಲಿ ಹೇಳಿಕೊಂಡಿದ್ದರು. ಅವರ ಹೆಸರು ಹಾಗೂ ಸಮಸ್ಯೆಗಳನ್ನು ಗುಪ್ತವಾಗಿರಿಸುವ ಕಾರಣ ಅವನ್ನೆಲ್ಲಾ ನಾನು ಇಲ್ಲಿ ಬಹಿರಂಗ ಪಡಿಸುತ್ತಿಲ್ಲ.

ಆಕೆ ಅವಿಭಕ್ತ ಕುಟುಂಬದ ಸದಸ್ಯೆ. ಅಣ್ಣ- ತಮ್ಮ, ಅಕ್ಕ ತಂಗಿಯರು ಜತೆ ಯಾಗಿ ವಾಸಿಸುತ್ತಿದ್ದರು. ಆ ಮನೆಯಲ್ಲಿ ತುಂಬಾ ಜನ ಜತೆಗಿದ್ದ ಕಾರಣ, ಸಣ್ಣ ಪುಟ್ಟ ಕಲಹಗಳು ನಡೆಯುತ್ತಿದ್ದಿರಬಹುದು. ಅಣ್ಣ ತಮ್ಮಂದಿರು ಜತೆಯಾಗಿ ತಮ್ಮ ಕುಟುಂಬದ ವ್ಯಾಪಾರ ವಹಿವಾಟು ನೋಡಿಕೊಳ್ಳುತ್ತಿದ್ದರು.

ಕುಟುಂಬದಲ್ಲಿನ ಸಮಸ್ಯೆಗಳು, ವ್ಯಾಪಾರದಲ್ಲಿ ನಷ್ಟ ಇವರ ಚಿತ್ತವನ್ನು ಮಾಟದತ್ತ ಹೊರಳಿಸಿತ್ತು. ಕೊನೆಗೆ ಪರಿಹಾರಕ್ಕೆ ಮಂತ್ರವಾದಿಗಳ ಮೊರೆ ಹೋದ ಕುಟುಂಬಕ್ಕೆ ಕೊನೆಗೆ ನಿಮಗಾಗದವರು ಮಾಟ ಮಾಡಿಸಿ ದ್ದಾರೆಂಬ ಸಬೂಬು ನೀಡಲಾಯಿತು. ಮಾಡಿದ ಮಾಟವನ್ನು ತೆಗೆಸಲು ಸಾಕಷ್ಟು ದುಡ್ಡು ಖರ್ಚು ಮಾಡಲಾಯಿತು. ಇವರು ನಿಗದಿಪ ಡಿಸಿದ್ದ ಮಂತ್ರವಾದಿ ತೀರಾ ಬ್ಯುಸಿ. ಎರಡು ವಾರಗಳ ಬಳಿಕ ಇವರ ಮಾಟ ತೆಗೆಸಲು ದಿನಾಂಕ ನಿಗದಿಪಡಿಸಲಾಯಿತು. ಆತ ನೀಡಿದ ಪಟ್ಟಿಯಂತೆ ಪೂಜಾ ಸಾಮಗ್ರಿ ಗಳನ್ನು ತರಿಸಲಾಯಿತು. ಬಲಿಗೆ ಕೋಳಿ, ಸಹಾಯಕ್ಕೆ ಜನವನ್ನು ಮಂತ್ರವಾದಿಯೇ ಕರೆತಂದಿದ್ದ. ರಾತ್ರಿ 7-30ರ ವೇಳೆಗೆ ಈ ಮಾಟ ಮಂತ್ರ ಬಿಡಿಸುವ ಕಾರ್ಯ ಆರಂಭಗೊಂಡಿತ್ತು. ಮಾಟ ಮಂತ್ರ ಬಿಡಿಸುವ ಕಾರ್ಯ ರಾತ್ರಿಯೇ ನಡೆಯುವುದು ವಿಶೇಷ!

ಕೆಲ ಪೂಜೆಗಳು ಮನೆಯೊಳಗೆ ನಡೆಯಿತು. ಬಳಿಕ ರಾತ್ರಿ 10 ಗಂಟೆಯ ವೇಳೆಗೆ ಸಾಮಗ್ರಿಗಳನ್ನೆಲ್ಲಾ ತುಳಸಿ ಕಟ್ಟೆ ಬಳಿ ತರಲಾಯಿತು. ಅಲ್ಲಿಯೂ ಕೆಲವೊಂದು ಪೂಜೆ ನಡೆಯಿತು. ಮಧ್ಯ ರಾತ್ರಿಯ ಬಳಿಕ ಮಂತ್ರವಾದಿಗೆ ದರ್ಶನ ಬರಲಾರಂಭಿಸಿತು. ಆತ ಕಂಪಿಸುತ್ತಾ, ಮನೆ ಯಂಗಳದಲ್ಲಿ ಓಡಾಡತೊಡಗಿದ. ಅಲ್ಲಲ್ಲಿ ಕತ್ತಿಯಿಂದ ಹೊಡೆಯಲಾ ರಂಭಿಸಿದ. ಕತ್ತಿ ನೆಲಕ್ಕೆ ಕಚ್ಚಿಕೊಂಡ ಸ್ಥಳಗಳನ್ನು ಉಳಿದವರು ಕಾಗದದಿಂದ ಗುರುತಿಸಿದರು.

ಗುರುತಿಸಿದ ಸ್ಥಳಗಳಲ್ಲಿ ಅಗೆಯಲಾಯಿತು. ಅಗೆದಾಗ ಅಲ್ಲಿ ಕೆಲವು ವಸ್ತುಗಳು ದೊರಕಿದವು. ಅಗೆಯುವ ಕೆಲಸವನ್ನು ಮನೆಯವರೇ ಮಾಡುತ್ತಿ ದ್ದರೂ ಸಹಾಯಕ್ಕೆ ಮಾಂತ್ರಿಕನ ವ್ಯಕ್ತಿಗಳಿದ್ದರು. ಎರಡು ಕಡೆ ಬಾಟಲುಗಳಲ್ಲಿ ನೀರು ಮತ್ತೆ ಅದರೊಳಗೆ ತಾಮ್ರದ ಬರಹವಿರುವ ಸುರುಳಿ, ಮೂರನೆಯ ಸ್ಥಳವು ತೆಂಗಿನ ಮರದ ಬುಡವಾಗಿತ್ತು. ಅಲ್ಲಿ ಚಿಕ್ಕದೊಂದು ತೆಂಗಿನಕಾಯಿ. ಆ ತೆಂಗಿನ ಕಾಯಿಯ ಕಣ್ಣನ್ನು ಕೊರೆದು ಅದರೊಳಗೆ ತಾಮ್ರದ ತಗಡನ್ನು ಇರಿಸಲಾಗಿತ್ತು.

ಮಾಟದ ವಸ್ತುಗಳನ್ನು ಮಂತ್ರವಾದಿ ತೆಗೆದುಕೊಂಡು ಹೋದ. ಅವನ ಪ್ರಕಾರ ಇವು ಅಪಾಯಕಾರಿ ವಸ್ತುಗಳಾಗಿದ್ದು, ಅವುಗಳನ್ನು ನದಿ ಯಲ್ಲಿ ಬಿಸಾಡಬೇಕೆಂದು ಆತ ಹೇಳಿದ್ದ. ಒಟ್ಟು ಯಾರೋ ಮಾಡಿಸಿದ್ದ ಮಾಟವನ್ನು ಮಂತ್ರವಾದಿ ತೆಗೆಸಿದ್ದ! ಇದರಿಂದ ಸಮಸ್ಯೆಗಳು ಪರಿಹಾರ ವಾಯಿತೇ ಎಂಬ ಪ್ರಶ್ನೆಗೆ ಮಾತ್ರ ಉತ್ತರ ಸಿಗಲಿಲ್ಲ. ಜತೆಗೆ ಮಾಟ ಮಾಡಿಸಿ ದ್ದಾರೆಂಬ ಬಗ್ಗೆಯೂ ಮಂತ್ರವಾದಿಯಿಂದ ಉತ್ತರ ಈ ಕುಟುಂಬಕ್ಕೆ ಸಿಕ್ಕಿರ ಲಿಲ್ಲ. ಅವರು ನೀಡುವ ಸಿದ್ಧ ಉತ್ತರ ‘ನಿಮಗಾಗದವರು ಮಾಟ ಮಾಡಿಸಿದ್ದಾರೆ’. ಅಂದ ಹಾಗೆ ಜಗತ್ತನಲ್ಲಿ ಯಾರಾದರೂ ವೈರಿಗಳಿಲ್ಲದ ವರು, ವೈಷಮ್ಯ ಇಲ್ಲದವರು ಯಾರಿದ್ದಾರೆ?

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News