ಟಿಪ್ಪು ಸುಲ್ತಾನನ ರಾಜನೀತಿ

Update: 2017-11-04 13:06 GMT

ಟಿಪ್ಪು ಸುಲ್ತಾನನ ಸಮಗ್ರ ಕೃಷಿ ಸುಧಾರಣಾ ಕ್ರಮದ ಭಾಗವಾಗಿ ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಹುಳ ಸಾಕಣೆೆ ಮುಂತಾದ ಪೂರಕ ಕಸುಬುಗಳಿಗೆ ಅನುಕೂಲವಾಗುವಂತೆ ರೂಪಿಸಿರುವ ನೀತಿಗಳು ಗಮನಾರ್ಹವಾಗಿವೆ.

ಟಿಪ್ಪುಸುಲ್ತಾನನ ಅವಧಿಯಲ್ಲಿ ತೋಟಗಾರಿಕೆ ಉಛ್ರಾಯ ಸ್ಥಿತಿಯಲ್ಲಿತ್ತು. ಯೂರೋಪ್ ಖಂಡದ ಬಹುತೇಕ ಎಲ್ಲ ಹಣ್ಣು, ತರಕಾರಿಗಳನ್ನು, ರೇಷ್ಮೆ ಕೃಷಿಯನ್ನು ಭಾರತಕ್ಕೆ ಪರಿಚಯಿಸಿದ್ದು ಟಿಪ್ಪುಸುಲ್ತಾನನೇ. ಫ್ರಾನ್ಸ್, ಮಸ್ಕಟ್, ಅರೇಬಿಯಾ ದೇಶಗಳಿಂದ ಲವಂಗ, ಕೇಸರಿ, ಖರ್ಜೂರ, ಬಾದಾಮಿ ಮುಂತಾದ ಸಸಿಗಳನ್ನು ತರಿಸಿಕೊಂಡಿದ್ದೇ ಅಲ್ಲದೆ, ಅದರ ಸೂಕ್ತ ಆರೈಕೆ ಮಾಡುವ ಮಾಲಿಯನ್ನೂ ಜೊತೆಗೆ ಕಳುಹಿಸುವಂತೆ ಟಿಪ್ಪುಸುಲ್ತಾನ್ ಆಯಾ ದೇಶದವರೊಂದಿಗೆ ಪತ್ರ ವ್ಯವಹಾರ ನಡೆಸಿದ್ದಾನೆ.

ತೋಟಗಾರಿಕೆಗೆ ಸಂಬಂಧಿಸಿದಂತೆ ಟಿಪ್ಪು ರೈತರಿಗೆ ಹೊರಡಿಸಿರುವ ಆದೇಶಗಳು ಹೀಗಿವೆ:

ಆದೇಶ ಸಂಖ್ಯೆ 4

ರೈತರು ಸೆಗಣಿಯನ್ನು ಗೊಬ್ಬರವಾಗಿ ಬಳಸತಕ್ಕದ್ದು. ಒಬ್ಬ ರೈತನಿಗೆ ಹೆಚ್ಚುವರಿಯಾಗಿ ನೀಡಲಾಗಿರುವ ಜಮೀನಿನಲ್ಲಿ ಆತ ಕಡಿಮೆ ಪ್ರಮಾಣದ ಬೇಸಾಯ ಮಾಡಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದು. ಭೂಮಿಯು ಫಲವತ್ತಾಗಿರುವ ಜಾಗದಲ್ಲಿ ಹೆಚ್ಚು ಕಬ್ಬು ಬೆಳೆಯಲು ಪಟೇಲರು ಮತ್ತು ರೈತರು ಆದ್ಯತೆ ಕೊಡಬೇಕು. ಒಂದು ವೇಳೆ ರೈತರು ಸೂಕ್ತ ಕಾರಣ ನೀಡದೆ ಕಬ್ಬು ಬೇಸಾಯ ಮಾಡಲು ನಿರಾಕರಿಸಿದರೆ ಅಂಥವರಿಂದ ದುಪ್ಪಟ್ಟು ದಂಡ ವಸೂಲಿ ಮಾಡಬೇಕು.

ಆದೇಶ 20

ಪ್ರತೀ ಗ್ರಾಮದಲ್ಲಿ 200 ಮಾವಿನ ಮರಗಳು ಮತ್ತು ಇತರ ಒಣ ಹಣ್ಣುಗಳ ಸಸಿಗಳನ್ನು ನೆಟ್ಟು ಅದರ ವಿವರಗಳನ್ನು ಸರಕಾರಕ್ಕೆ ಸಲ್ಲಿಸತಕ್ಕದ್ದು.

ಆದೇಶ 27

ಒಬ್ಬ ರೈತ ಮೊದಲನೆ ಬಾರಿಗೆ ಅಡಿಕೆ ಬೇಸಾಯ ಮಾಡಲು ಮುಂದಾದರೆ ಮೊದಲ ಐದು ವರ್ಷ ಕಂದಾಯ ಮನ್ನಣೆ ಮಾಡುವುದು. ಆರನೆ ವರ್ಷ ಅರ್ಧದಷ್ಟು ಮತ್ತು ಏಳನೆ ವರ್ಷದಿಂದ ಪೂರ್ಣ ತೆರಿಗೆ ವಸೂಲಿ ಮಾಡತಕ್ಕದ್ದು.

ಆದೇಶ 28

ಮೊದಲ ಬಾರಿಗೆ ತೆಂಗಿನಕಾಯಿ ತೋಟ ಮಾಡಲು ಮುಂದಾಗುವ ರೈತನಿಗೆ ಮೊದಲ ನಾಲ್ಕು ವರ್ಷ ಕಂದಾಯ ಇರುವುದಿಲ್ಲ; ಐದನೆ ವರ್ಷ ಅರ್ಧದಷ್ಟು ಕಂದಾಯ ಮತ್ತು ಆರನೆ ವರ್ಷದಿಂದ ಮಾಮೂಲಿನಂತೆ ಕಂದಾಯ ವಸೂಲಿ ಮಾಡುವುದು. ಈ ಜಮೀನಿನಲ್ಲಿ ಬೆಳೆದ ತರಕಾರಿ ಮತ್ತು ಸೊಪ್ಪುಗಳಿಗೆ ಕಂದಾಯ ಅನ್ವಯಿಸುವುದಿಲ್ಲ.

ಟಿಪ್ಪು ಸುಲ್ತಾನ ನೀಲಗಿರಿಯನ್ನು ಒಳಗೊಂಡಂತೆ ಹಲವು ವಿದೇಶಿ ಮತ್ತು ಹೊಸ ಹಣ್ಣು, ತರಕಾರಿ ಮತ್ತು ಹೂವುಗಳ ತಳಿಗಳನ್ನು ಭಾರತಕ್ಕೆ ಪರಿಚಯಿಸಿದ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ವಿವಿಧ ಜಾತಿಯ ಮಾವಿನ ಮರಗಳನ್ನು ಆತ ನೆಡಿಸಿದ್ದ. ಟಿಪ್ಪು ಕಾಲದಲ್ಲಿ ನೆಟ್ಟ ಅನೇಕ ಮಾವಿನ ಮರಗಳ ಪೈಕಿ ಮೂರು ಮರಗಳು ಈಗಲೂ ಫಲ ನೀಡುತ್ತಿವೆ ಎನ್ನಲಾಗಿದೆ.

ಮುಂದಿನ ಸಂಚಿಕೆಯಲ್ಲಿ ಪಶು ಸಂಗೋಪನೆಗೆ ಸಂಬಂಧಪಟ್ಟಂತೆ ಟಿಪ್ಪು ಸುಲ್ತಾನ್ ರೂಪಿಸಿದ ನೀತಿಗಳನ್ನು ಗಮನಿಸೋಣ.

Similar News