ಶಾಂತಿ ಕದಡುವ ಸಂಘಟನೆಗಳ ನಿಷೇಧವಾಗಲಿ: ದಿನೇಶ್ ಗುಂಡೂರಾವ್
ಬೆಂಗಳೂರು, ನ.4: ಸಮಾಜದಲ್ಲಿ ಶಾಂತಿ, ಸೌಹಾರ್ದತೆಯನ್ನು ಕದಡುವ ಯಾವುದೇ ಧರ್ಮದ ಮೂಲಭೂತವಾದ ಸಂಘಟನೆಗಳಿರಲಿ ಅವುಗಳನ್ನು ಕೇಂದ್ರ ಸರಕಾರ ನಿಷೇಧಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಹೇಳಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವಂತೆ ನಾನು ಟ್ವಿಟ್ ಮಾಡಿದ್ದು ನಿಜ. ಅದರ ಜತೆಗೆ, ಹಿಂದೂ ಮೂಲಭೂತವಾದಿ ಸಂಘಟನೆಗಳಾದ ಆರೆಸ್ಸೆಸ್, ಬಜರಂಗದಳ, ವಿಶ್ವಹಿಂದೂ ಪರಿಷತ್ ಸಂಘಟನೆಳನ್ನು ನಿಷೇಧಿಸಬೇಕು ಎಂದರು.
ಆರೆಸ್ಸೆಸ್ ಸಂಘಟನೆಯನ್ನು ಈ ಹಿಂದೆ ನಿಷೇಧ ಮಾಡಲಾಗಿತ್ತು. ಅವರ ಸಿದ್ಧಾಂತದ ಹಿನ್ನೆಲೆಯಲ್ಲಿಯೆ ರಾಷ್ಟ್ರಪಿತ ಮಹಾತ್ಮಗಾಂಧೀಜಿಯ ಹತ್ಯೆಯಾದದ್ದು. ಧರ್ಮದ ಹೆಸರಿನಲ್ಲಿ ಜನರಲ್ಲಿ ಭಯದ ವಾತಾವರಣ ನಿರ್ಮಿಸುವಂತಹ ಸಂಘಟನೆಗಳ ನಿಷೇಧವಾಗಬೇಕು ಎಂದು ಪುನರುಚ್ಚರಿಸಿದರು.
ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ಗೋ ರಕ್ಷಕರ ಹೆಸರಿನಲ್ಲಿ ಅಮಾಯಕರ ಕಗ್ಗೊಲೆ ನಡೆದಾಗಲೇ ನಾನು ವಿಶ್ವಹಿಂದೂ ಪರಿಷತ್, ಬಜರಂಗದಳವನ್ನು ನಿಷೇಧ ಮಾಡುವಂತೆ ಒತ್ತಾಯಿಸಿದ್ದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ನಾಯಕರು ನಡೆಸುತ್ತಿರುವ ಪರಿವರ್ತನಾ ರ್ಯಾಲಿಯೂ ಯಾವುದೇ ಗೊತ್ತು ಗುರಿ ಇಲ್ಲದ ಯಾತ್ರೆಯಾಗಿದೆ. ಹತಾಶರಾಗಿ ಕಾಂಗ್ರೆಸ್ ವಿರುದ್ಧ ಯಾತ್ರೆ ಮಾಡುತ್ತಿದ್ದಾರೆ. ಆರಂಭದಲ್ಲಿಯೇ ಅವರ ಯಾತ್ರೆ ವಿಫಲಗೊಂಡಿದೆ. ಬಿಜೆಪಿಯವರು ಯಾತ್ರೆ ಮಾಡಿದಷ್ಟು ನಮಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.