×
Ad

ದೇವರಾಜ ಅರಸು ಹಾದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ: ಎಚ್.ಆಂಜನೇಯ

Update: 2017-11-04 21:49 IST

ಬೆಂಗಳೂರು, ನ.4: ಮಾಜಿ ಮುಖ್ಯಮಂತ್ರಿ ದೇವರಾಜ ಅರಸುರವರ ಸಾಮಾಜಿಕ ನ್ಯಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮುಖ್ಯವಾಗಿ ತಳ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತಂದ ಕೀರ್ತಿ ಸಿದ್ದರಾಮಯ್ಯರಿಗೆ ಸಲ್ಲಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಂಗಳೂರು ಮಹಾನಗರ ಕಾಂಗ್ರೆಸ್ ಸಮಿತಿ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿ ಸಾಧಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಸಮಾಜವಾದದ ಮುನ್ನಡೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಾಧನೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವರಾಜ ಅರಸು ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಪರವಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಕೇವಲ ಅಹಿಂದ ವರ್ಗಕ್ಕೆ ಸೀಮಿತವಾಗದೆ, ಎಲ್ಲ ಜಾತಿಯ ಬಡವರ ಏಳ್ಗೆಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ ಪ್ರತಿಪಕ್ಷಗಳ ಕೆಲವು ನಾಯಕರು ಸಿದ್ದರಾಮಯ್ಯ ಸರಕಾರವನ್ನು ಕೇವಲ ಅಹಿಂದಕ್ಕೆ ಮಾತ್ರ ಸೀಮಿತಗೊಳಿಸಿ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ದೇವಸ್ಥಾನವಿದ್ದಂತೆ: ನಿಷ್ಠೆಯಿಂದ ದುಡಿಯುವ ಕಾರ್ಯಕರ್ತರಿಗೆ ಕಾಂಗ್ರೆಸ್ ದೇವಸ್ಥಾನವಿದ್ದಂತೆ. ಪಕ್ಷದಲ್ಲಿ ಅನಾಚಾರ, ಪಕ್ಷ ವಿರೋಧಿ ಚಟುವಟಿಕೆಗಳಿಗೆ ಕಿಂಚಿತ್ತೂ ಅವಕಾಶವಿಲ್ಲ. ಕಾಂಗ್ರೆಸ್ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ದುಡಿದಿದ್ದನ್ನು ಗಮನಿಸಿದ ಪಕ್ಷದ ನಾಯಕರು ನನ್ನನ್ನು ಪಕ್ಷದ ಕಚೇರಿಗೆ ಆಹ್ವಾನಿಸಿ ಚುನಾವಣೆಗೆ ಟಿಕೆಟ್ ನೀಡಿದರು. ನನ್ನ ರೀತಿಯಲ್ಲಿ ಹಲವು ನಾಯಕರು ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದರಿಂದ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಅಂತಹ ನಾಯಕರ ಮಾದರಿಯನ್ನು ಇಂದಿನ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕು ಎಂದರು.

ವಿಚಾರ ಸಂಕಿರಣದಲ್ಲಿ ವಿಧಾನ ಪರಿಷತ್‌ನ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್, ಪರಿಷತ್‌ನ ಮಾಜಿ ಸದಸ್ಯ ಎಲ್.ಹನುಮಂತಯ್ಯ, ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ವಿ.ನರಸಿಂಹಯ್ಯ, ಹಿಂದುಳಿದ ಸಮಾಜದ ಮುಖಂಡರಾದ ಸುರೇಶ್ ಎಂ.ಲಾತೂರ್, ವಿ.ರಾಜಣ್ಣ, ಮಂಜುನಾಥ ಸೇರಿ ಹಲವು ಪ್ರಮುಖರಿದ್ದರು.

ಇತ್ತೀಚಿನ ರಾಜಕೀಯ ವಾತಾವರಣ ಕಲ್ಮಶಗೊಂಡಿದೆ. ಗ್ರಾಮ-ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಠೇವಣಿ ಪಡೆಯದ ಅಭ್ಯರ್ಥಿಗಳು ಏಕಾಏಕಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗುತ್ತಾರೆ. ಕೇವಲ ಅಧಿಕಾರಕ್ಕಾಗಿ ಮುಗಿಬೀಳುವವರ ಸಂಖ್ಯೆ ಹೆಚ್ಚಿದೆಯೇ ಹೊರತು ಪಕ್ಷಕ್ಕಾಗಿ ದುಡಿಯುವವರ ಸಂಖ್ಯೆ ಕ್ಷೀಣಿಸುತ್ತಿದೆ.
-ಎಚ್.ಆಂಜನೇಯ ಸಚಿವ, ಸಮಾಜ ಕಲ್ಯಾಣ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News