ನಕಲಿ ಕಂಪೆನಿಯಿಂದ 500ಕೋಟಿ ರೂ.ವಂಚನೆ
ಬೆಂಗಳೂರು, ನ.4: ವಿನಿವಿಂಕ್ ಕಂಪೆನಿ ವಂಚನೆ ಮಾದರಿಯಲ್ಲಿ ಜನತೆಯ ಅಮಾಯಕತೆಯನ್ನೇ ಬಂಡವಾಳ ಮಾಡಿಕೊಡು ಸುಮಾರು 500ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಿಸಿರುವ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಎಂಬ ನಕಲಿ ಕಂಪೆನಿಯ ಮಾಲಕರನ್ನು ಕೂಡಲೇ ಬಂಧಿಸಬೇಕೆಂದು ಭಾರತೀಯ ಪ್ರಜಾ ಸೇನೆಯ ಕಾರ್ಯಕರ್ತರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ದುಪ್ಪಟ್ಟು ಬಡ್ಡಿಯ ಆಮಿಷಕ್ಕೆ ಒಳಗಾದ ಸುಮಾರು 10ಸಾವಿರಕ್ಕೂ ಹೆಚ್ಚು ಕುಟುಂಬಗಳು ತಮ್ಮ ಹಣವನ್ನು ನಕಲಿ ಕಂಪೆನಿಗೆ ಕೊಟ್ಟು ಬೀದಿ ಪಾಲಾಗಿವೆ. ಹಣ ದೋಚಿಕೊಂಡಿರುವ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಕಂಪೆನಿಯ ಮಾಲಕರಾದ ಸಯದ್ ಫರೀದ್ ಅಹ್ಮದ್ ಮತ್ತು ಅಫಾಕ್ ದುಬೈನಲ್ಲಿ ತಲೆ ಮರೆಸಿಕೊಂಡಿದ್ದಾರೆ.
ಬೆಂಗಳೂರಿನ ಆರ್‌ಟಿ ನಗರ ಬಡಾವಣೆಯ ಕನಕನಗರ ಬಡಾವಣೆಯಲ್ಲಿ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಎಂಬ ನಕಲಿ ಕಂಪೆನಿಯನ್ನು ವಂಚನೆ ಮಾಡಲೆಂದೇ ಸ್ಥಾಪಿಸಲಾಗಿದೆ. ಈ ಕಂಪೆನಿಯ ವಂಚನೆಗೆ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಪಶುಗಳಾಗಿದ್ದಾರೆ. ಹೀಗಾಗಿ ಕಂಪೆನಿಯ ಮಾಲಕರನ್ನು ಬಂಧಿಸುವ ಮೂಲಕ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಭಾರತೀಯ ಪ್ರಜಾ ಸೇನೆಯ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಮಾತನಾಡಿ, ಆ್ಯಂಬಿಡೆಂಟ್ ಮಾರ್ಕೆಟಿಂಗ್ ಕಂಪೆನಿ ಕೇವಲ 11ತಿಂಗಳಲ್ಲಿ ಸುಮಾರು 500ಕೋಟಿ ರೂ. ಹಣವನ್ನು ಜನತೆಯಿಂದ ದೋಚಿದೆ. ಇಂತಹ ನಕಲಿ ಕಂಪೆನಿಗಳ ಸ್ಥಾಪನೆಯ ಹಿಂದೆ ಪೊಲೀಸ್, ಜನಪ್ರತಿನಿಧಿಗಳ ಪಾತ್ರವು ಇದೆ. ಹೀಗಾಗಿ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಹಣ ದೋಚಿ ದುಬೈಗೆ ಪರಾರಿಯಾಗಿರುವ ನಕಲಿ ಕಂಪೆನಿಯ ಮಾಲಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಹಕ್ಕೊತ್ತಾಯಗಳು
-ಆ್ಯಂಬಿಡೆಂಟ್ ಮಾರ್ಕೆಟಿಂಗ್ ಎಂಬ ನಕಲಿ ಕಂಪೆನಿಯ ಮಾಲಕರಾದ ಸಯದ್ ಫರೀದ್ ಅಹ್ಮದ್ ಮತ್ತು ಅಫಾಕ್‌ರನ್ನು ಕೂಡಲೆ ಬಂಧಿಸಬೇಕು.
-ನಕಲಿ ಕಂಪೆನಿಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಸರಕಾರ ಜಫ್ತಿ ಮಾಡಿ ಜನತೆಗೆ ಹಿಂದಿರುಗಿಸಬೇಕು.
-ನಕಲಿ ಕಂಪೆನಿಯ ಸ್ಥಾಪನೆಗೆ ಸಹಾಯ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು.