ಒಬ್ಬರೇ ಕುಳಿತು ಊಟ ಮಾಡುವುದು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ

Update: 2017-11-05 09:33 GMT

 ಮಾನವರು ಸಾಮಾಜಿಕ ಜೀವಿಗಳು. ಹೀಗಾಗಿ ಒಂಟಿತನ ಮತ್ತು ಮಾನಸಿಕ/ದೈಹಿಕ ಸಮಸ್ಯೆಗಳಿಗೂ ಸಂಬಂಧವಿದೆ ಎಂದು ಹಲವಾರು ಅಧ್ಯಯನಗಳು ಬೆಟ್ಟು ಮಾಡಿರುವು ದರಲ್ಲಿ ಅಚ್ಚರಿಯೇನಿಲ್ಲ. ಇದೀಗ ನೂತನ ಅಧ್ಯಯನವೊಂದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.

 ಒಬ್ಬರೇ ಕುಳಿತು ಊಟ ಮಾಡುವುದು ವಯಸ್ಕರನ್ನು ಮೆಟಾಬಾಲಿಕ್ ಸಿಂಡ್ರೋಮ್‌ನ ಹೆಚ್ಚಿನ ಅಪಾಯಕ್ಕೆ ತಳ್ಳುತ್ತದೆ ಎಂದು ದಕ್ಷಿಣ ಕೊರಿಯಾದ ಸೋಲ್‌ನ ಡಂಗಕ್ ವಿವಿಯ ಇಲ್ಸನ್ ಆಸ್ಪತ್ರೆಯ ಸಂಶೋಧಕರ ತಂಡವು ನಡೆಸಿದ ಅಧ್ಯಯನವು ದೃಢಪಡಿಸಿದೆ. ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಸ್ಥಿತಿಗಳನ್ನು ಒಟ್ಟಾರೆಯಾಗಿ ಮೆಟಾಬಾಲಿಕ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

ಸಂಶೋಧಕರು ಹೆಚ್ಚಾಗಿ ಒಬ್ಬರೇ ಕುಳಿತು ಊಟ ಮಾಡುವ ಪ್ರವೃತ್ತಿ ಹೊಂದಿರುವ 7,725 ವಯಸ್ಕರನ್ನು ತನ್ನ ಅಧ್ಯಯನಕ್ಕೆ ಒಳಪಡಿಸಿತ್ತು. ಧೂಮ್ರಪಾನ ಮತ್ತು ಮದ್ಯಪಾನ ಚಟ, ವಯಸ್ಸು, ವೃತ್ತಿ ಮತ್ತು ವ್ಯಾಯಾಮದಂತಹ ವಿವಿಧ ಪ್ರಕ್ರಿಯೆಗಳ ಪರಿಣಾಮಗಳನ್ನು ಪರಿಗಣಿಸಿದಾಗ ಒಬ್ಬರೇ ಕುಳಿತು ಊಟ ಮಾಡುವವರಲ್ಲಿ ಆರೋಗ್ಯ ಸಮಸ್ಯೆ ಗಳುಂಟಾಗುವ ಅಪಾಯ ಗಮನಾರ್ಹವಾಗಿ ಹೆಚ್ಚಿರುವುದು ಬೆಳಕಿಗೆ ಬಂದಿದೆ.

ಬೊಜ್ಜು ಹೆಚ್ಚುವ ಶೇ.45ರಷ್ಟು ಹೆಚ್ಚಿನ ಅಪಾಯ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ನ ಶೇ.64 ರಷ್ಟು ಹೆಚ್ಚಿನ ಅಪಾಯ ಪುರುಷರಲ್ಲಿ ಕಂಡು ಬಂದಿದ್ದು, ದಿನಕ್ಕೆರಡು ಬಾರಿ ಒಬ್ಬರೇ ಕುಳಿತು ಊಟ ಮಾಡುವ ಮಹಿಳೆಯರಿಗೆ ಹೋಲಿಸಿದರೆ ಇದು ಶೇ.200ಕ್ಕೂ ಅಧಿಕವಾಗಿದೆ. ಮಹಿಳೆಯರಲ್ಲಿ ಇಂತಹ ಹೆಚ್ಚಿನ ಅಪಾಯದ ಪ್ರಮಾಣ ಶೇ.29ರಷ್ಟು ಮಾತ್ರ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News