ಧರ್ಮಗುರುಗಳು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ: ರಫಾಯಲ್ ರಾಜ್
ಬೆಂಗಳೂರು, ನ.5: ಕರ್ನಾಟಕದಲ್ಲಿರುವ ಧರ್ಮಗುರುಗಳು ಭಾಷೆಗಳ ಆಧಾರದ ಮೇಲೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದರೂ ರಾಜ್ಯದ ಕ್ರೈಸ್ತರು ಮೌನವಾಗಿದ್ದಾರೆ ಎಂದು ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ವತಿಯಿಂದ ರಾಮಮೂರ್ತಿ ನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಕ್ರೈಸ್ತರು ನಾಡಿನ ಭಾಷೆ, ನಾಡು-ನುಡಿ ಮೂಲಕ ಜನರನ್ನು ಒಂದುಗೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಕೆಲವು ಅನ್ಯಭಾಷಿಕ ಧರ್ಮಗುರುಗಳು ಚರ್ಚ್‌ಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕನ್ನಡಿಗ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಸರಕಾರ ಕ್ರಮ ಕೈಗೊಳ್ಳಬೇಕು ಎಂದ ಅವರು, ಕರ್ನಾಟಕದ ಕನ್ನಡದ ಕೈಸ್ತರ ಐಕ್ಯತೆಯನ್ನು ಪ್ರದರ್ಶಿಸಲು 2018 ರ ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಈ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು. ಈ ವೇಳೆ ಕಾರ್ಯಕ್ರಮದಲ್ಲಿ ಸಾಹಿತಿ ಎ.ಬಿ.ಬಸವರಾಜು, ಎ.ದೇವಕುಮಾರ್, ರಾಜಪ್ಪ ಡೇವಿಡ್, ಪ್ರಕಾಶ್ ಹಾಗೂ ಚರ್ಚ್‌ನ ಫಾದರ್ ದಿನೇಶ್ ರಾಯ್ ಉಪಸ್ಥಿತರಿದ್ದರು.