ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಂತಕರನ್ನು ಬಂಧಿಸಲು ಡಿ.5ರ ಗಡುವು
ಬೆಂಗಳೂರು, ನ.5: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಂತಕರನ್ನು ಡಿಸೆಂಬರ್ 5ರೊಳಗೆ ಬಂಧಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಗೌರಿ ಲಂಕೇಶ್ ಹತ್ಯಾ ವಿರೋಧಿ ಹೋರಾಟ ವೇದಿಕೆ ಎಚ್ಚರಿಕೆ ನೀಡಿದೆ.
ರವಿವಾರ ನಗರದ ಜೈಭೀಮ್ ಭವನದಲ್ಲಿ ಏರ್ಪಡಿಸಿದ್ದ ಆಯೋಜಿಸಿದ್ದ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು. ಗೌರಿ ಹತ್ಯೆ ಖಂಡಿಸಿ ಡಿಸೆಂಬರ್‌ನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, ಇದೇ ವೇಳೆ ಗೌರಿ ಲಂಕೇಶ್ ಪತ್ರಿಕೆಯನ್ನು ಗೌರಿ ಬಳಗದ ಮುಖಾಂತರ ಉಳಿಸಿಕೊಳ್ಳುವ ಕುರಿತು ಸಮಾಲೋಚನೆ ನಡೆಸಲಾಯಿತು. ಇದಕ್ಕೆ ಸ್ಥಳೀಯ ಮುಖಂಡರ, ಹೋರಾಟಗಾರರ ನೆರವು ಪಡೆಯಲು ತೀರ್ಮಾನ ಮಾಡಲಾಯಿತು. ಹಾಗೂ ಪ್ರತಿವರ್ಷ ಸೆ.5ರಂದು ಗೌರಿ ದಿನವನ್ನಾಗಿ ಆಚರಿಸಲು ಚಿಂತನೆ ಮಾಡಲಾಗುತ್ತಿದೆ. ಅದಕ್ಕಾಗಿ ಪ್ರತಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಗೌರಿ ಲಂಕೇಶ್ ಬಳಗ ಸ್ಥಾಪಿಸಬೇಕಿದೆ ಎಂದು ಸಭೆ ಅಭಿಪ್ರಾಯ ವ್ಯಕ್ತಪಡಿಸಿತು.
ಈ ವೇಳೆ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಗೌರಿ ಲಂಕೇಶ್ ಪತ್ರಿಕೆಯನ್ನು ಹಲವಾರು ಜನರು ಓದುತ್ತಿದ್ದರು. ಅದರಿಂದಲೇ ಅವರ ಕುಟುಂಬ ಜೀವನ ನಡೆಯುತ್ತಿತ್ತು. ಈಗ ಪತ್ರಿಕೆ ಯಾರು ಓದುತ್ತಾರೆ ಎಂದು ಅವರ ತಾಯಿ ಕೇಳುತ್ತಿದ್ದಾರೆ. ಗೌರಿ ತಾಯಿಯ ಪ್ರಶ್ನೆಗೆ ಉತ್ತರ ಹೇಗೆ ನೀಡಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರದಿಂದ ಪತ್ರಿಕೆಯತನ್ನು ನಡೆಸುವ ಪ್ರಯತ್ನದ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ಗೌರಿ ಹತ್ಯೆಗೆ ನ್ಯಾಯ ಸಿಗಬಹುದು. ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಜಾಹೀರಾತಿಗಳಿಗೆ ಆದ್ಯತೆ ನೀಡುತ್ತಿರಲಿಲ್ಲ. ಕೇವಲ ಸುದ್ದಿಗೆ ಒತ್ತು ನೀಡಿತ್ತಿದ್ದರು. ಜನರನ್ನು ನಂಬಿದ್ದರು. ಇದರಿಂದ ಗೌರಿಯು ಪತ್ರಿಕೋದ್ಯಮಕ್ಕೆ ನೀಡುತ್ತಿದ್ದ ಗೌರವ ಏನು ಎಂಬುದು ಅರ್ಥವಾಗುತ್ತದೆ ಎಂದು ಅವರು ಸ್ಮರಿಸಿಕೊಂಡರು.
ಲೇಖಕ ಶ್ರೀಪಾದ್ ಭಟ್, ಗೌರಿ ಹತ್ಯೆ ಸಾಮಾನ್ಯ ಜನರಲ್ಲಿ ತಲ್ಲಣ ಮೂಡಿಸದಿದ್ದರೂ ಯುವಜನರಲ್ಲಿ ಆತಂಕ ಹುಟ್ಟಿಸಿದೆ. ಗೌರಿ ಮತ್ತು ಎಂ.ಎಂ.ಕಲಬುರ್ಗಿ ಅವರ ಹತ್ಯೆ ಹಾಗೂ ಅದಕ್ಕೆ ತೆಗೆದುಕೊಂಡ ಕ್ರಮಗಳ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.
ಗೌರಿ ಹತ್ಯೆಯಾಗಿ ಇಂದಿಗೆ ಎರಡು ತಿಂಗಳು ಕಳೆದಿವೆ. ಹಂತಕರನ್ನು ಹಿಡಿಯಲಿಲ್ಲ, ಹತ್ಯೆಯನ್ನು ಸಂಭ್ರಮಿಸಿದ ಹಾಗೂ ಸಮರ್ಥಿಸಿದ ಸಂಘಟನೆಗಳನ್ನೂ ಪೊಲೀಸರು ನಿಗ್ರಹಿಸಲಿಲ್ಲ. ಗೃಹ ಸಚಿವ ರಾಮಲಿಂಗಾರೆಡ್ಡಿ 15 ದಿನಕ್ಕೊಮ್ಮೆ ಗೌರಿ ಹತ್ಯೆ ತನಿಖೆಯ ಪ್ರಗತಿ ವರದಿಯನ್ನು ಜನರಿಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಸಬಾಸ್ಟಿನ್ ದೇವರಾಜು, ಸುರೇಶ್ ಭಟ್, ದಸಂಸ ಮುಖಂಡ ಮುನಿವೆಂಕಟಪ್ಪ, ಡಿವೈಎಫ್‌ಐ ಕಾರ್ಯದರ್ಶಿ ಬಸವರಾಜ ಪೂಜಾರ್ ಸೇರಿದಂತೆ ಇನ್ನಿತರೆ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
‘ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೋಮುಗಲಭೆ ಹೆಚ್ಚಾಗಿದ್ದು, ಕೊಲೆಗಳ ಸಂಖ್ಯೆಯೂ ಏರಿಕೆಯಾಗಿದೆ. ಕರ್ನಾಟಕದಲ್ಲಿ ಮಾತ್ರವಷ್ಟೇ ವಿಚಾರವಾಧಿಗಳ ಹತ್ಯೆಗಳು ನಡೆದಿಲ್ಲ. ಬೇರೆ ರಾಜ್ಯಗಳಲ್ಲೂ ನಡೆದಿದೆ. ಯಾವ ಹತ್ಯೆಗೂ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಪೊಲೀಸರು ಕೊಲೆಗಾರರನ್ನು ಹಿಡಿಯುವ ಬದಲು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆಯೇ ಎನ್ನುವ ಅನುಮಾನ ಮೂಡುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ದೇಶದ ಬಹುದೊಡ್ಡ ಕೊಲೆಗಡುಕ’
-ಮರಿಯಪ್ಪ ನಿವೃತ್ತ ನ್ಯಾಯಮೂರ್ತಿ