×
Ad

ದೇಶದಲ್ಲಿ ಮರೆಯಾಗುತ್ತಿರುವ ಮಾನವೀಯತೆ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

Update: 2017-11-05 21:26 IST

ಬೆಂಗಳೂರು, ನ.5: ಒಂದು ಸಮುದಾಯವನ್ನು ನಿರಂತರ ತುಳಿಯುವ ಷಡ್ಯಂತ್ರಗಳು ನಡೆಯುತ್ತಿದ್ದು, ದೇಶದಲ್ಲಿ ಮಾನವೀಯತೆಯು ಮರೆಯಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾಧ ವ್ಯಕ್ತಪಡಿಸಿದರು.

ಅವರು ಬೆಂಗಳೂರು ಸಅದಿಯಾ ಸ್ಫಟಿಕ ಮಹೋತ್ಸವದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಬನ್ನೇರುಘಟ್ಟದ ಶಾನುಬೋಗನ ಹಳ್ಳಿಯಲ್ಲಿ ಪಿಝಾ ಗ್ರೂಪಿನ ಸಹಯೋಗದಲ್ಲಿ ನಿರ್ಮಾಣವಾಗಲಿರುವ ಹಾಜಿ ಅಹ್ಮದ್ ಭಾವ ಮೇಮೋರಿಯಲ್ ಸಅದಿಯಾ ಹ್ಯಾಪಿ ಲಿವಿಂಗ್ ರೆನ್ ಶಿಲಾನ್ಯಾಸ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ದೇಶದ ಎಲ್ಲಾ ಜಾತ್ಯಾತೀತ ಶಕ್ತಿಗಳು ಒಂದಾಗಬೇಕಿದೆ. ಧಾರ್ಮಿಕ ನಾಯಕರು ಆಯಾಯ ಧರ್ಮಾನುಯಾಯಿಗಳಿಗೆ ಮಾನವೀಯತೆಯ ಪಾಠ ಕಲಿಸಿ ಕೊಡಬೇಕಾಗಿದೆ. ಇಲ್ಲಿ ಮನುಷ್ಯತ್ವ ಉಳಿಯಬೇಕಾಗಿದೆ.ಮನುಷ್ಯತ್ವ ಪಾಠ ಹೇಳಿ ಕೊಡುವುದರಲ್ಲಿ ಸಅದಿಯಾ ಸಂಸ್ಥೆ ಮತ್ತು ಅದರ ಸಾರಥಿಗಳು ಮುಂಚೂಣಿಯಲ್ಲಿದ್ದಾರೆ ಎಂದು ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ.ದೇವೆ ಗೌಡ ಅಭಿಪ್ರಾಯಪಟ್ಟರು.

ದೇಶದ ಮುಂದಿನ ಚುನಾವಣೆ ಜಾತ್ಯಾತೀತ ತತ್ವದ ಅಡಿಪಾಯಕ್ಕೆ ಕಾರಣವಾಗಬೇಕು.ಆ ನಿಟ್ಟಿನಲ್ಲಿ ನನ್ನ ಉಸಿರು ಇರುವ ತನಕ ಹೋರಾಟ ಮಾಡುತ್ತೇವೆ. ಜಾತ್ಯಾತೀತ ಶಕ್ತಿಗಳನ್ನು ಒಂದುಗೂಡಿಸಲು ಸಿದ್ದನಿದ್ದೇನೆ ಎಂದು ಎಚ್.ಡಿ.ದೇವೇಗೌಡ ಹೇಳಿದರು.

  ಸಅದಿಯಾ ಎಜುಕೇಶನಲ್ ಫೌಂಡೇಶನ್ ಇದರ ಪ್ರಧಾನ ಕಾರ್ಯದರ್ಶಿ ಶಾಫಿ ಸಹದಿ ಮಾತನಾಡಿ, ಅಲ್ಪಸಂಖ್ಯಾತ ಮುಸ್ಲಿಮರ ಸಾವಿರಾರು ಮಕ್ಕಳಿಗೆ ಶಿಕ್ಷಣ ಮತ್ತು ಸಮಾಜಿಕ ಮಾನ್ಯತೆ ಕೊಡುವ ಕೋಟ್ಯಾಂತರ ರುಪಾಯಿಯ ಯೋಜನೆಯನ್ನು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಬಿ.ಎಂ.ಫಾರೂಕ್ ರವರ ಮಾನವೀಯತೆ ಮತ್ತು ಕಳಕಳಿಯ ಬಗ್ಗೆ ಮಾತನಾಡುವುದಕ್ಕೆ ಪಕ್ಷದ ಅಗತ್ಯವಿಲ್ಲ. ನಮಗೆ ಪಕ್ಷಕ್ಕಿಂತಲೂ ಸಹಕರಿಸುವ ವ್ಯಕ್ತಿ ದೊಡ್ಡವರು ಎಂದು ಹೇಳಿದರು.

ಸಹದಿಯ ಫೌಂಡೇಶನ್ ಕಳೆದ ಹದಿನಾಲ್ಕು ವರ್ಷದಲ್ಲಿ ಸಮಾಜದ ಬಡ-ನಿರ್ಗತಿಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಲೌಕಿಕ ಶಿಕ್ಷಣ ನೀಡುತ್ತಿದ್ದು ಕೊಳಗೇರಿ ನಿವಾಸಿಗಳ ಮಕ್ಕಳಿಗೆ ವಿದ್ಯೆ ಮತ್ತು ಧರ್ಮ ಜ್ಞಾನವನ್ನು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ. ಈಗಾಗಲೇ ನೂರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಸಂಸ್ಥೆಯ ಕನಸಿನ ಯೋಜನೆಯಾದ ಸಹದಿಯಾ ಹ್ಯಾಪಿ ಲಿವಿಂಗ್ ರೆನ್‌ನಲ್ಲಿ 5 ಸಾವಿರ ವಿದ್ಯಾರ್ಥಿಗಳನ್ನು ಎಲ್‌ಕೆಜಿಯಿಂದ ಪದವಿ ತನಕ ಹಾಗೇ ಸಿವಿಲ್ ಸರ್ವಿಸ್, ಜರ್ನಲಿಸಂ, ಕಾನೂನು ಶಿಕ್ಷಣದ ಮೂಲಕ ದೇಶದ ಆದರ್ಶ ವ್ಯಕ್ತಿಗಳಾಗಿ ರೂಪಿಸಲಿದ್ದೇವೆ ಎಂದು ಶಾಫಿ ಸಹದಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಆಟಕೋಯ ಕುಂಬೋಲ್ ತಂಙಳ್ ಸಹದಿಯಾ ಸಂಸ್ಥೆ ಬಾಡಿಗೆಯಲ್ಲಿ ಸಣ್ಣ ಮಟ್ಟಿನಲ್ಲಿ ಆರಂಭಗೊಂಡು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆ ಎಂದ ಅವರು ಎಲ್ಲಿ ಹೃದಯಶುದ್ಧಿ ಮತ್ತು ಉದ್ದೇಶ ಶುದ್ಧಿ ಇರುತ್ತದೆಯೋ ಅಲ್ಲಿ ಅಲ್ಲಾಹನ ಅನುಗ್ರಹ ಇರುತ್ತದೆ ಎಂದರು.

ಸಹದಿಯ ಕೊಳಗೇರಿ ಬಾಲಕರ ವಸ್ತು ಪ್ರದರ್ಶನವನ್ನು ಮಂಡ್ಯ ಎಂ.ಪಿ. ಪುಟ್ಟರಾಜು ಉದ್ಘಾಟಿಸಿದರು. ಕೊಳಗೇರಿ ಬಾಲಕಿಯರ ಕಂಪ್ಯೂಟರ್ ಲ್ಯಾಬ್ ಮತ್ತು ಟೈಲರಿಂಗ್ ಸೆಂಟರನ್ನು ಶ್ರೀಮತಿ ಪೌಝಿಯಾ ಫಾರೂಕ್ ರವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಸುನ್ನೀ ಶಿಕ್ಷಣ ಮಂಡಳಿ ಬೆಂಗಳೂರು ಪ್ರಾಂತ ಇದರ ಅಧ್ಯಕ್ಷ ಡಾ.ಎಸ್ ಎಸ್ ಎ ಖಾದರ್, ಜುಮ್ಮಾ ಮಸೀದಿ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ.ಅನ್ವರ್ ಶರೀಫ್ , ಕೇರಳ ಎಸ್.ವೈ.ಎಸ್ಸ್ ಉಪಾಧ್ಯಕ್ಷ ಅಬ್ದುಲ್ ಖಾದರ್ ಮದನಿ ಪಳ್ಳಂಗೋಡ್, ಬಶೀರ್ ಅಬ್ದುಲ್ ಕರೀಂ ಸಖಾಫಿ, ಎಸೆಸ್ಸೆಫ್ ಬೆಂಗಳೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಪಾಲಿರಿ, ದುಬೈ ಬ್ಯಾರೀಸ್ ಕಲ್ಚರಲ್ ಫಾರಮ್ ಇದರ ಅಧ್ಯಕ್ಷ ಡಾ.ಯೂಸುಫ್ ದುಬೈ, ಟಾಲೆಂಟ್ ಫೌಂಡೇಶನ್ ಇದರ ಸ್ಥಾಪಕರಾದ ಅಬ್ದುಲ್ ರವೂಫ್ ಪುತ್ತಿಗೆ, ಮುಹಮ್ಮದ್ ಗಯಾಝುದ್ದೀನ್ ಬಹರೈನ್, ಎಸ್.ಮಹಮ್ಮದಾಜಿ ಸಾಗರ್, ಸಹದಿಯಾ ವುಮೆನ್ಸ್ ಕಾಲೇಜ್ ಚೆಯರ್‌ಮ್ಯಾನ್ ಜನಾಬ್ ಯೂನುಸ್ ಸೇಠ್, ಮುಮ್ತಾಝ್ ಅಲಿ ಕೃಷ್ಣಾಪುರ, ರಾಜಕೀಯ ಮುಖಂಡರಾದ ಮಹಮ್ಮದ್ ಕುಂಞಿ ವಿಟ್ಲ, ಲಿಟ್ಲ್ ಪ್ಲವರ್ ಶಿಕ್ಷಣ ಸಂಸ್ಥೆಯ ಇಕ್ಬಾಲ್ ಅಹ್ಮದ್, ಅಭಿಮಾನ್ ಕನ್‌ಸ್ಟ್ರಕ್ಷನ್ ಮಾಲ ಉಮ್ಮರ್ ಹಾಜಿ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪತ್ರಕರ್ತ ಬಿ.ಎಂ.ಮುಹಮ್ಮದ್ ಹನೀಫ್ ನಿರೂಪಿಸಿದರು. ಇಸ್ಮಾಯಿಲ್ ಸಹದಿ ಕಿನ್ಯಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News