ಸತ್ತವರ ಮಧ್ಯೆ ಬದುಕು ದೂಡುತ್ತಿರುವ ವಾರಣಾಸಿಯ ಡೋಮ್‌ಗಳು

Update: 2017-11-06 10:41 GMT

ಗಂಗಾನದಿಯ ದಂಡೆಯಲ್ಲಿರುವ ವಾರಣಾಸಿ ಅಥವಾ ಕಾಶಿ ಹಿಂದುಗಳ ಪವಿತ್ರ ಕ್ಷೇತ್ರಗಳಲ್ಲೊಂದಾಗಿದೆ. ಇಲ್ಲಿಯ ಪ್ರಸಿದ್ಧ ದೇವಸ್ಥಾನಗಳ ದರ್ಶನಕ್ಕೆ, ಇಲ್ಲಿಯ ವಿಶಿಷ್ಟ ಸಂಸ್ಕೃತಿಯನ್ನು ಅನುಭವಿಸಲು ವಿಶ್ಯಾದ್ಯಂತದಿಂದ ಯಾತ್ರಿಕರು ಮತ್ತು ಪ್ರವಾಸಿಗಳು ಈ ಪುರಾತನ ನಗರಿಗೆ ಭೇಟಿ ನೀಡುತ್ತಾರೆ. ನಗರದ ಬೀದಿ ಬೀದಿಗಳಲ್ಲಿ ದೇವಸ್ಥಾನಗಳಲ್ಲಿ ಉರಿಯುತ್ತಿರುವ ಕರ್ಪೂರದ ಘಮದೊಂದಿಗೆ ಭಾರತೀಯ ಶಾಸ್ತ್ರೀಯ ಸಂಗೀತದ ನಿನಾದ ಅನುರಣಿಸುತ್ತಿರುತ್ತದೆ.

ಇಲ್ಲಿ ಸಾವು ಬಹುದೊಡ್ಡ ಆಕರ್ಷಣೆ

ಸತ್ತವರ ಅಂತ್ಯಸಂಸ್ಕಾರವನ್ನು ಕಾಶಿಯಲ್ಲಿ ನಡೆಸಿದರೆ ಅಂಥಹವರಿಗೆ ಮತ್ತೆ ಜನ್ಮವಿರುವುದಿಲ್ಲ ಮತ್ತು ಅವರು ಮೋಕ್ಷವನ್ನು ಪಡೆಯುತ್ತಾರೆ ಎನ್ನುವುದು ಆಸ್ತಿಕರಲ್ಲಿ ಮನೆ ಮಾಡಿರುವ ನಂಬಿಕೆಯಾಗಿದೆ.

ಹರಿಶ್ಚಂದ್ರ ಘಾಟ್‌ನಲ್ಲಿ ಉರಿಯುತ್ತಿರುವ ಚಿತೆಗಳ ಮಧ್ಯೆ ಕುಳಿತಿರುವವಳ ಹೆಸರು ಯಮುನಾ ದೇವಿ(68). ಆಕೆ ಬಿಳಿಯ ಬಟ್ಟೆಯಲ್ಲಿ ಕಟ್ಟಿದ, ಹೂವುಗಳ ರಾಶಿಯನ್ನು ಹೊತ್ತ ಶವವೊಂದು ಘಾಟ್‌ಗೆ ಬರುತ್ತಿರುವುದನ್ನೇ ನೋಡುತ್ತಿದ್ದಾಳೆ. ‘ರಾಮ ನಾಮ್ ಸತ್ಯ ಹೈ’ ಎಂದು ಪಠಿಸುತ್ತಿದ್ದ ಕುಟುಂಬ ಸದಸ್ಯರು ಶವವನ್ನು ಅಂತ್ಯಸಂಸ್ಕಾರಕ್ಕೆ ಮುನ್ನ ಕೊನೆಯ ಸ್ನಾನಕ್ಕಾಗಿ ಗಂಗಾ ನದಿಯತ್ತ ಹೊತ್ತೊಯ್ಯುತ್ತಿದ್ದಂತೆ ಯಮುನಾ ದೇವಿ ಎದ್ದು ತನ್ನ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಾಳೆ.

ಡೋಮ್‌ನ ಬದುಕು

ಯಮನಾ ದೇವಿ ಓರ್ವ ಡೋಮ್ ಆಗಿದ್ದಾಳೆ. ಈ ಡೋಮ್‌ಗಳು ಇಲ್ಲಿಯ ರುದ್ರಭೂಮಿಯ ಉಸ್ತುವಾರಿ ನೋಡಿಕೊಳ್ಳುತ್ತಾರೆ ಮತ್ತು ಚಿತೆಗೆ ಸ್ಪರ್ಶ ಮಾಡುವ ಅಗ್ನಿ ಇವರ ಬಳಿಯೇ ಇರುತ್ತದೆ. ಡೋಮ್ ಅನುಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನಡೆಸಿದರೆ ಸತ್ತವರಿಗೆ ಸ್ವರ್ಗದ ಬಾಗಿಲುಗಳು ತೆರೆಯುವುದಿಲ್ಲ ಎನ್ನುವ ಯಮುನಾ ದೇವಿ, ಆದರೆ ಸಾವಿನ ಸಂದರ್ಭದಲ್ಲಿ ಮಾತ್ರ ಜನರು ನಮ್ಮನ್ನು ಗೌರವಿಸುತ್ತಾರೆ. ಹೀಗಾಗಿ ನಾವು ಸತ್ತವರ ನಡುವೆ ಬದುಕುತ್ತ ಜೀವನ ರೂಪಿಸಿಕೊಂಡಿದ್ದೇವೆ ಎನ್ನುತ್ತಾಳೆ.

ಇದು ಸಾವಿನ ವ್ಯವಹಾರ

ಹಿಂದು ಪುರಾಣಗಳಲ್ಲಿ ಹೇಳಿರುವಂತೆ ಕಲ್ಲು ಡೋಮ್ ಎಂಬಾತ ದೇವಿ ಪಾರ್ವತಿಯ ಬೆಂಡೋಲೆಗಳನ್ನು ಕದಿಯಲು ಪ್ರಯತ್ನಿಸಿದಾಗ ಶಿವನು ಇಡೀ ಡೋಮ್ ಸಮುದಾಯಕ್ಕೆ ಶಾಪವನ್ನು ನೀಡಿದ್ದ. ಶಿವನಿಂದ ಕ್ಷಮೆಯನ್ನು ಪಡೆಯಲು ಡೋಮ್‌ಗಳು ಚಿತಾಗ್ನಿಯ ಸಂರಕ್ಷಕರಾಗಿರಲು ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ದಲಿತರಲ್ಲಿ ತಳವರ್ಗಕ್ಕೆ ಸೇರಿರುವ ಡೋಮ್‌ಗಳು ಹಿಂದು ಜಾತಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗಿನ ಸ್ತರದಲ್ಲಿದ್ದಾರೆ. ಕೆಲವರು ಕೃಷಿಕರಾಗಿ ಅಥವಾ ನೇಕಾರರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಉಳಿದಂತೆ ಹೆಚ್ಚಿನವರು ‘ಸಾವಿನ ವ್ಯವಹಾರ’ದ ಮೂಲಕ ತಮ್ಮ ಮತ್ತು ತಮ್ಮ ಕುಟುಂಬಗಳ ತುತ್ತಿನ ಚೀಲಗಳನ್ನು ತುಂಬಿಸುತ್ತಿದ್ದಾರೆ.

ರುದ್ರಭೂಮಿಗಳು

ಇಂದು ಡೋಮ್ ಸಮುದಾಯದ ಸುಮಾರು 35 ಕುಟುಂಬಗಳು ಕಾಶಿಯ ಮುಖ್ಯ ಅಂತ್ಯಸಂಸ್ಕಾರ ಸ್ಥಳಗಳಾದ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್‌ನ ಸುತ್ತ ವಾಸವಾಗಿದ್ದಾರೆ. ಈ ಘಾಟ್‌ಗಳು ತಲಾ ಏಳು ಚ.ಕಿ.ಮೀ.ವಿಸ್ತೀರ್ಣವನ್ನು ಹೊಂದಿದ್ದು, ಗಂಗಾನದಿಯ ದಂಡೆಯುದ್ದಕ್ಕೂ ಚಾಚಿಕೊಂಡಿವೆ. ಚಿತೆಗಳಲ್ಲಿ ಬೇಯುತ್ತಿರುವ ಶವಗಳ ವಾಸನೆ ಮತ್ತು ಕಪ್ಪುಹೊಗೆಯ ಮೋಡ ಈ ಘಾಟ್‌ಗಳ ಸುತ್ತಲೂ ಆವರಿಸಿಕೊಂಡಿರುತ್ತದೆ. ಅಂತ್ಯಸಂಸ್ಕಾರ ವಿಧಿಗಳಲ್ಲಿ ಗಂಗೆಯ ಧಾರ್ಮಿಕ ಮಹತ್ವದಿಂದಾಗಿ ಈ ಘಾಟ್‌ಗಳು ನದಿಯ ಬಳಿ ನಿರ್ಮಾಣಗೊಂಡಿವೆ.

ಅಂತ್ಯಸಂಸ್ಕಾರವು ಮುಗಿದ ಬಳಿಕ ಹಿಂದುಗಳು ಚಿತಾಭಸ್ಮವನ್ನು ಗಂಗಾನದಿಯಲ್ಲಿ ವಿಸರ್ಜಿಸುತ್ತಾರೆ. ಇದರಿಂದ ಸತ್ತವರ ಆತ್ಮಗಳು ಶುದ್ಧಗೊಳ್ಳುತ್ತವೆ ಎನ್ನುವ ನಂಬಿಕೆಯಿದೆ.

ಗಳಿಕೆ

 ಇಲ್ಲಿ ಅಂತ್ಯಸಂಸ್ಕಾರಕ್ಕೆ ತರಲಾಗುವ ಶವಗಳು ಬಿಳಿಯ ಬಟ್ಟೆಗಳಲ್ಲಿ ಸುತ್ತಲ್ಪಟ್ಟಿರುತ್ತವೆ ಮತ್ತು ಹಣೆಯ ಮೇಲೆ ವಿಭೂತಿಯನ್ನು ಬಳಿದಿರುತ್ತಾರೆ. ಅಂತಿಮ ಗೌರವ ಸೂಚಿಸಲು ಶವಗಳ ಮೇಲೆ ಹೂವುಗಳೂ ಇರುತ್ತವೆ. ಸಾಮಾನ್ಯವಾಗಿ ಈ ಘಾಟ್‌ಗಳಲ್ಲಿ ಪ್ರತಿದಿನ 25ರಿಂದ 50 ಶವಗಳ ಅಂತ್ಯಸಂಸ್ಕಾರವನ್ನು ಡೋಮ್‌ಗಳು ನಡೆಸುತ್ತಾರೆ. ನಾನು ಕೇವಲ 300 ರೂ.ಗಳನ್ನು ಗಳಿಸಿರುವ ದಿನಗಳೂ ಇವೆ, 6,000 ರೂ.ಗೂ ಹೆಚ್ಚಿನ ಹಣವನ್ನು ಗಳಿಸಿರುವ ದಿನಗಳೂ ಇವೆ ಎನ್ನುತ್ತಾನೆ ಡೋಮ್ ಶ್ಯಾಮ ಚೌಧರಿ.

  ಶವಗಳು ಸಂಪೂರ್ಣವಾಗಿ ಸುಟ್ಟ ಬಳಿಕ ಅಂತ್ಯಸಂಸ್ಕಾರಕ್ಕೆ ಮುನ್ನ ತೆಗೆದಿರಿಸಲಾಗಿದ್ದ ಅವುಗಳ ಮೇಲಿನ ಬಟ್ಟೆಗಳು ಮತ್ತು ಆಭರಣಗಳನ್ನು ಸಂಗ್ರಹಿಸುವ ಡೋಮ್ ಕುಟುಂಬಗಳ ಮಕ್ಕಳು ಅವುಗಳನ್ನು ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ವಾರಣಾಸಿ ಮತ್ತು ರುದ್ರಭೂಮಿಗಳಲ್ಲಿನ ಬದುಕಿನ ಕುರಿತು ಪುಸ್ತಕವೊಂದನ್ನು ಬರೆದಿರುವ ಡಾ.ಕೆ.ಕೆ.ಶರ್ಮಾ. ಅಂತ್ಯಸಂಸ್ಕಾರದ ವೇಳೆ ಬಳಕೆಯಾಗಿರದ ಕಟ್ಟಿಗೆ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ, ಅವುಗಳನ್ನು ಡೋಮ್‌ಗಳ ಮನೆಗಳಲ್ಲೂ ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

 1998ರಲ್ಲಿ ವಾರಣಾಸಿಯ ಮುನ್ಸಿಪಲ್ ಕಮಿಟಿಯು ಡೋಮ್‌ಗಳು ಮಾಡುವ ಕಾರ್ಯಕ್ಕೆ 100 ರೂ.ಗಳ ಶುಲ್ಕವನ್ನು ನಿಗದಿಗೊಳಿಸಿತ್ತು. ಆದರೆ ಇದು ಬರೀ ನಿರ್ಣಯವಾಗಿಯೇ ಉಳಿದಿದೆ. ಡೋಮ್‌ಗಳು ಅಂತ್ಯಸಂಸ್ಕಾರಕ್ಕೆ ಜನರು ಕೊಡಲು ಸಾಧ್ಯವಿರುವಷ್ಟು ಹಣವನ್ನು ಕಿತ್ತುಕೊಳ್ಳುತ್ತಾರೆ.

ಮೃತರ ಸೇವೆ

ಯಮುನಾ ದೇವಿ ತನ್ನ ಕೊನೆಯುಸಿರುವವರೆಗೂ ತನ್ನ ಕಾಯಕವನ್ನು ಮುಂದುವರಿಸಲು ಬಯಸಿದ್ದಾಳೆ. ಈ ಕೆಲಸ ನನಗೆ ಶಕ್ತಿಯನ್ನು ನೀಡುತ್ತಿದೆ. ಓರ್ವ ಹೆಣ್ಣಾಗಿ ಮತ್ತು ವಿಧವೆಯಾಗಿ ನಾನು ಈ ಕೆಲಸ ಮಾಡುತ್ತಿರುವುದಕ್ಕೆ ಜನರು ನನ್ನನ್ನು ಆಗಾಗ್ಗೆ ಅವಮಾನಿಸುತ್ತಲೇ ಇರುತ್ತಾರೆ. ಆದರೆ ರುದ್ರಭೂಮಿಯಲ್ಲಿ ವ್ಯಕ್ತಿಯ ಲಿಂಗ, ಜಾತಿ ಮತ್ತು ವೈವಾಹಿಕ ಸ್ಥಿತಿಗತಿಗೆ ಯಾವುದೇ ಅರ್ಥವಿಲ್ಲ. ಆ ನಂಬಿಕೆಯೊಂದಿಗೆ ನಾನು ಬದುಕುತ್ತಿದ್ದೇನೆ ಮತ್ತು ಸತ್ತವರ ಸೇವೆಯನ್ನು ಮುಂದುವರಿಸುತ್ತೇನೆ ಎನ್ನುತ್ತಾಳೆ ಆಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News