ಅಖಿಲ ಭಾರತ ಅಂಚೆ ಇಲಾಖೆ ಹಮ್ಮಿಕೊಂಡಿದ್ದ ‘ಹಾಕಿ ಪಂದ್ಯಾವಳಿ’ಗೆ ಚಾಲನೆ
ಬೆಂಗಳೂರು, ನ.6: ಮೂವತ್ತೊಂದನೆ ಅಖಿಲ ಭಾರತ ಅಂಚೆ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಹಾಕಿ ಪಂದ್ಯಾವಳಿ ಇಂದಿನಿಂದ ಆರಂಭಗೊಂಡಿದ್ದು, ನ.10ರ ವರೆಗೆ ನಡೆಯಲಿದೆ.
ಇಲ್ಲಿನ ಅಶೋಕನಗರ ಹಾಕಿ ಕ್ರೀಡಾಂಗಣದಲ್ಲಿ, ಒಲಿಂಪಿಕ್ ಆಟಗಾರರು, ಅರ್ಜುನ ಪ್ರಶಸ್ತಿ ವಿಜೇತರೂ ಹಾಗೂ ಬೆಂಗಳೂರು ಹಾಕಿಯ ಗೌರವ ಕಾರ್ಯದರ್ಶಿ ಡಾ.ಎ.ಬಿ.ಸುಬ್ಬಯ್ಯ ಸೋಮವಾರ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಕರ್ನಾಟಕ ವಲಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳಿಗೆ ಶುಭ ಕೋರಿದರು.
ಮಧ್ಯಪ್ರದೇಶ, ಪಂಜಾಬ್, ಒಡಿಶಾ, ಉತ್ತರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಆರು ರಾಜ್ಯಗಳ ತಂಡಗಳು ಪಾಲ್ಗೊಂಡಿದ್ದು, ದೇಶೀಯ ತಂಡದಲ್ಲಿ ಆಡುವಾಗ ತಮ್ಮ ಆಟಗಾರರೊಂದಿಗೆ ಆದ ಅನುಭವಗಳನ್ನು ಹಂಚಿಕೊಂಡರು.
ವರ್ಣರಂಜಿತ ಉದ್ಘಾಟನಾ ಸಮಾರಂಭದ ನಂತರ ಪಂದ್ಯಾವಳಿಯ ಮೊದಲ ಪಂದ್ಯವಾಗಿ ಕರ್ನಾಟಕ ಮತ್ತು ಪಂಜಾಬ್ ತಂಡದ ನಡುವಿನ ಪಂದ್ಯ ನಡೆಯಿತು.
ಈ ಪಂದ್ಯದಲ್ಲಿ ಅತಿಥೇಯ ಕರ್ನಾಟಕ ತಂಡ 4:1 ಗೋಲುಗಳಿಂದ ಜಯ ಸಾದಿಸಿತು ಎಂದು ಪ್ರಕಟನೆ ತಿಳಿಸಿದೆ.